ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ

Update: 2024-08-29 16:43 GMT

ಬೆಂಗಳೂರು : ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಸಂಕಷ್ಟ ಎದುರಾಗಿದೆ. ಸಚಿವ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ದಾಖಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ದೇಶಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 4, 2024ರಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಯತ್ನಾಳ್, “ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ, ಅರ್ಧ ಪಾಕಿಸ್ತಾನವಿದೆ. ಅವರಿಗೆ ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ” ಎಂದು ಹೇಳಿಕೆ ನೀಡಿದ್ದರು.

ತಬು ರಾವ್ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿ ಪತ್ರಿಕೆ ವರದಿ ಸೇರಿದಂತೆ, ವಸ್ತುಗಳನ್ನು ಕೋರ್ಟ್ ಗೆ ಸಾಕ್ಷಿ ನೀಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಯತ್ನಾಳ್ ಗೆ ಸಮನ್ಸ್ ಜಾರಿಗೊಳಿಸಿದೆ. ಅರ್ಜಿದಾರ ಪರ ಸೂರ್ಯ ಮುಕುಂದರಾಜ್ , ಸಂಜಯ್ ವಕಾಲತ್ತು ವಹಿಸಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಸ್ಲಾಂ ಧರ್ಮಕ್ಕೆ ಸೇರಿದ ಎಲ್ಲ ವ್ಯಕ್ತಿಗಳನ್ನು ಪಾಕಿಸ್ತಾನದವರು ಎಂದು ಈ ಹಿಂದೆಯೂ ಉಲ್ಲೇಖಿಸಿದ್ದರು. ಮಾರ್ಚ್ 6, 2024ರಂದು ಶಿವಾಜಿ ಜಯಂತಿ ಉದ್ದೇಶಿಸಿ ಮಾತನಾಡಿದ್ದ ಅವರು, ಒಂದು ವೇಳೆ ನಾನು ಗೃಹ ಸಚಿವನಾದರೆ ವಿಜಯಪುರದ ಎಲ್ಲಾ ಮುಸ್ಲಿಮರನ್ನು ಎನ್ ಕೌಂಟರ್ ನಲ್ಲಿ ಮುಗಿಸಲು ಆದೇಶ ನೀಡುತ್ತೇನೆ. ಮುಸ್ಲಿಮರು ದೇಶ ವಿರೋಧಿಗಳು, ದೇಶದ್ರೋಹಿಗಳು. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದರು.

ಯತ್ನಾಳ್ ವಿರುದ್ಧ, ಐಪಿಸಿಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಅಪರಾಧಗಳ ಪ್ರಕರಣವನ್ನು ದಾಖಲಿಸಲು ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News