ಅತಿವೃಷ್ಟಿಯಿಂದಾಗಿ 1,05,937 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಅತಿವೃಷ್ಟಿಯಿಂದಾಗಿ ಒಟ್ಟು 74,993 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು ಕೃಷಿ ಬೆಳೆ ಹಾನಿ, 30,941ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿ ಸೇರಿ ಒಟ್ಟು 1,05,937 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದಾಗಿ ಪ್ರಾಥಮಿಕ ವರದಿ ಆಧಾರದಲ್ಲಿ ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ 2024ರ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ 1ರಿಂದ 25ರವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿ.ಮೀ ಆಗಿದ್ದು, ಶೇ.58 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಂಗಾರು ಅವಧಿಯಲ್ಲಿ ಅಂದರೆ ಜೂನ್ 1ರಿಂದ ಸೆಪ್ಟಂಬರ್ 30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮೀ. ಆಗಿದ್ದು, ಈ ಬಾರಿ 978 ಮಿ.ಮೀ. ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲೂ ಶೇ.15ರಷ್ಟು ಹೆಚ್ಚುವರಿ ಮಳೆಯಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. 2023ರಲ್ಲಿ ಇದು 505.81 ಟಿಎಂಸಿ ಇತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಜ್ಯದಲ್ಲಿ ಪ್ರಸ್ತುತ 63,647 ಕೆರೆ, ಕಲ್ಯಾಣಿಗಳ ಅಭಿವೃದ್ದಿ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ. ಅತಿವೃಷ್ಟಿಯಿಂದಾಗಿ 12,553 ಕಿ.ಮೀ. ಗ್ರಾಮೀಣ ರಸ್ತೆಗಳು ಹಾನಿಗೀಡಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ 1106 ಸಣ್ಣ ಸೇತುವೆ, ಮೋರಿಗಳು ಹಾನಿಗೀಡಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಕುರಿತು ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅತಿವೃಷ್ಟಿಗೆ 25 ಜನ ಮೃತ್ಯು, 85 ಜಾನುವಾರುಗಳ ಬಲಿ..!
ಹಿಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 25 ಜನರು ಮೃತಪಟ್ಟಿದ್ದು, ತುರ್ತು ಪರಿಹಾರ ಪಾವತಿಸಲಾಗಿದೆ. 19 ದೊಡ್ಡ ಜಾನುವಾರುಗಳು, 66 ಸಣ್ಣ ಜಾನುವಾರುಗಳು ಸಾವಿಗೀಡಾಗಿವೆ. ಎಸ್‍ಡಿಆರ್‌ಎಫ್ ನಿಯಮಾನುಸಾರ ದೊಡ್ಡ ಜಾನುವಾರುಗಳಿಗೆ ಒಟ್ಟು 6.84 ಲಕ್ಷ ರೂ., ಸಣ್ಣ ಜಾನುವಾರುಗಳಿಗೆ ಒಟ್ಟು 2.8 ಲಕ್ಷ ರೂ. ಸೇರಿದಂತೆ ಒಟ್ಟು 9.6 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
2161 ಮನೆಗಳು ಹಾನಿ..!
ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದಾಗಿ 84ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20ಲಕ್ಷ ರೂ. ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ 50 ಸಾವಿರ ರೂ.ವರೆಗೆ 48 ಗಂಟೆಗಳ ಒಳಗಾಗಿ ಪರಿಹಾರ ಒದಗಿಸಲು ಆದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅತಿವೃಷ್ಟಿ ಪರಿಹಾರಕ್ಕೆ 666.96 ಕೋಟಿ ರೂ. ಅನುದಾನ ಲಭ್ಯ..!
ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಲಭ್ಯವಿದ್ದು, ಅನುದಾನ ಕೊರತೆ ಇರುವುದಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 551.25 ಕೋಟಿ ರೂ. ಹಾಗೂ ತಹಶೀಲ್ದಾರ್ ಅವರ ಖಾತೆಯಲ್ಲಿ 115.71 ಕೋಟಿ ರೂ. ಸೇರಿದಂತೆ ಒಟ್ಟು 666.96 ಕೋಟಿ ರೂ. ಹಣ ಲಭ್ಯವಿದ್ದು ಸಮರ್ಪಕವಾಗಿ ಬಳಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.