42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಶೀಘ್ರದಲ್ಲಿಯೇ ಕೇಂದ್ರಕ್ಕೆ ವರದಿ: ಸಚಿವ ಕೃಷ್ಣ ಬೈರೇಗೌಡ

Update: 2023-09-19 18:19 GMT

ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ತಾಲೂಕುಗಳುಗಳಿಗೆ ಸಂಬಂಧ ಪಟ್ಟಂತೆ ಕೇಂದ್ರದ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ವಾರದಲ್ಲಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದೆ. ಹೀಗಾಗಿ, ಈಗಾಗಲೇ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬರ ತಾಲೂಕುಗಳುಗಳಿಗೆ ಸಂಬಂಧ ಪಟ್ಟಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ತ್ವರಿತ ತಯಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೇವಿಗೂ, ಕುಡಿಯುವ ನೀರಿಗೂ ಪ್ರತ್ಯೇಕ ಪರಿಹಾರದ ಅವಕಾಶವಿದ್ದು, ಮುಂದಿನ ಮೂರು ದಿನದಲ್ಲಿ ಈ ಎಲ್ಲವನ್ನೂ ಸೇರಿಸಿ ಸಂಪೂರ್ಣ ಮೆಮೊರಾಂಡಮ್ ತಯಾರಿಸಲಾಗುವುದು. ಎನ್ ಡಿಆರ್‍ಎಫ್ ನಿಯಮಗಳ ಅನ್ವಯ ಒಟ್ಟಾರೆ 5 ರಿಂದ 6 ಸಾವಿರ ಕೋಟಿ ಪರಿಹಾರ ಪಡೆಯಲು ಅವಕಾಶ ಇದೆ. ಕೇಂದ್ರಕ್ಕೆ ಮನವಿ ಸಲ್ಲಿಸಿದ ಕೂಡಲೇ ಕೇಂದ್ರದ ಅಧಿಕಾರಿಗಳೂ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮೆಮೊರಾಂಡಮ್ ಅನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಈ ವಾರಾಂತ್ಯದೊಳಗೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಇನ್ನೂ, ರಾಜ್ಯದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೀವ್ರ ಅಭಾವ ಇಲ್ಲ. ಕುಡಿಯುವ ನೀರಿನ ಪೂರೈಕೆ ಸಲುವಾಗಿಯೇ ಎಲ್ಲ ಜಿಲ್ಲಾ ಪಂಚಾಯತ್ ಸಿಇಒ ಗಳ ಖಾತೆಗೆ ಈಗಾಗಲೇ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಅಲ್ಲದೆ, ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 462 ಕೋಟಿ ಹಣ ಇದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ. ಮತ್ತಷ್ಟು ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.

ಕೇಂದ್ರ ಬರ ಮಾರ್ಗಸೂಚಿ ಅನ್ವಯ ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಎದುರಾಗಿದೆ. 34 ತಾಲೂಕುಗಳಲ್ಲಿ ಭಾಗಶಃ ಬರದ ಸ್ಥಿತಿ ಇದೆ. ಈ ಎರಡನ್ನೂ ಸೇರಿಸಿ ಕಳೆದ ವಾರ 195 ತಾಲೂಗಳಲ್ಲಿ ಬರ ಘೋಷಿಸಲಾಗಿದೆ. ಉಳಿದಂತೆ ಇನ್ನೂ 41 ತಾಲೂಕುಗಳಲ್ಲೂ ಸಹ ಪರಿಸ್ಥಿತಿ ಬಿನ್ನವಾಗೇನು ಇಲ್ಲ. ಆದರೆ, ಕೇಂದ್ರದ ಮಾರ್ಗಸೂಚಿಯಂತೆ ಈ ತಾಲೂಕುಗಳಲ್ಲಿ ಬರ ಘೋಷಣೆ ಸಾಧ್ಯವಿಲ್ಲ. ಆದರೆ, ಅಕ್ಟೋಬರ್ ತಿಂಗಳ ಕೊನೆಯ ವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶ ಇದೆ. ಹೀಗಾಗಿ 195 ತಾಲೂಕುಗಳೇ ಅಂತಿಮವಲ್ಲ. ಬದಲಾಗಿ ಅಕ್ಟೋಬರ್ ತಿಂಗಳ ಮಳೆ ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲೂಕುಗಳನ್ನೂ ಎರಡನೇ ಪಟ್ಟಿಯಲ್ಲಿ “ಬರ ಪೀಡಿತ” ಎಂದು ಘೋಷಿಸಲಾಗುವುದು ಎಂದರು.

ಬರ ಘೋಷಿಸಿದ ಮೊದಲ ರಾಜ್ಯ ನಮ್ಮದು..!

ದೇಶದ ಹಲವು ರಾಜ್ಯಗಳಲ್ಲಿ ಇಂದು ಬರದ ಸ್ಥಿತಿ ಇದೆ. ಕೇರಳ, ಬಿಹಾರ, ಝಾಖರ್ಂಡ್, ಮಣಿಪುರ, ಮಿಜೋರಾಂ ರಾಜ್ಯಗಳಲ್ಲೂ ಈ ವರ್ಷ ತೀವ್ರ ಮಳೆ ಕೊರತೆ ಎದುರಾಗಿದೆ. ಆದರೆ, ಈ ಯಾವ ರಾಜ್ಯಗಳೂ ಈವರೆಗೆ “ಬರ” ಘೋಷಣೆ ಮಾಡಿಲ್ಲ. ಆದರೆ, ಕರ್ನಾಟಕದಲ್ಲಿ ರಾಜ್ಯ ಮಾತ್ರ ಮುಂಜಾಗ್ರತಾ ಕ್ರಮವಾಗಿ ಬರ ಘೋಷಿಸಲಾಗಿದೆ ಎಂದು ಸಚಿವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News