ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಸೂಚನೆ; ಸಿಎಂ ಸಿದ್ಧರಾಮಯ್ಯ ಆಕ್ಷೇಪ
ಮೈಸೂರು,ಆ.28: ತಮಿಳುನಾಡಿಗೆ 15 ದಿನ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂಬ ಕಾವೇರಿ ಟ್ರಿಬುನಲ್ ಸೂಚನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು, ಈ ಬಗ್ಗೆ ನೀರಾವರಿ ಸಚಿವರು ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ಟ್ರಿಬುನಲ್ ಅವರು ಸಭೆ ನಡೆಸಿ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್ 15 ದಿನ ನೀರು ಬಿಡಬೇಕು ಎಂದು ಹೇಳಿದ್ದಾರೆ. ಈ ಹಿಂದೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಹೇಳಿದ್ದರು. ನಮ್ಮ ರಾಜ್ಯದ ಜಲಾಶಯಗಳಲ್ಲಿ ಸಾಕಾಗುವಷ್ಟು ನೀರು ಇದ್ದಿದ್ದರೆ ತಮಿಳುನಾಡಿಗೆ ಆಗಸ್ಟ್ 30 ರವರೆಗೆ 86 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದೂವರೆಗೆ 30 ಟಿಎಂಸಿ ನೀರು ಹರಿಸಲಾಗಿದೆ. ಆದರೂ ಕಾವೇರಿ ಟ್ರಿಬುನಲ್ ಮುಂದೆ ತಮಿಳುನಾಡಿನವರು ಪ್ರತಿನಿತ್ಯ 24 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ವಾದ ಮಂಡಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಮಳೆ ಇಲ್ಲ. ನಮಗೆ ಕುಡಿಯಲು ನೀರಿಗೆ ಅಭಾವ ಇದೆ. ನಾವು ಪ್ರತಿನಿತ್ಯ ಅಷ್ಟೊಂದು ನೀರುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರೂ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಹೇಳಿದ್ದಾರೆ.
ಈ ಸಂಬಂಧ ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಏನು ಮಾಡಬೇಕು. 5 ಸಾವಿರ ಕ್ಯೂಸೆಕ್ಸ್ ನೀರು ಕೊಡಲು ಆಗುತ್ತಾ ಇಲ್ಲವ ಎಂಬುದನ್ನು ಚರ್ಚೆ ಮಾಡುತ್ತೇನೆ. ನಮ್ಮಲ್ಲಿ ನೀರು ಇಲ್ಲ ಎಂದರೂ ನೀರು ಕೊಡಿ ಎಂದು ಹೇಳಿದೆ. ನೀರು ಹರಿಸುವ ಬಗ್ಗೆ ಸಂಕಷ್ಟ ಸೂತ್ರ ಆಗಿಲ್ಲ. ಹಾಗಾಗಿ ಈ ಸಂಬಂಧ ನೀರಾವರಿ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾನೂನು ತಜ್ಞರ ಜೊತೆ ಚರ್ಚಿಸಿ ನ್ಯಾಯಾಲಯದ ಮುಂದೆ ಅರ್ಜಿ ಹಾಕಬೇಕ ಏನು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.