ಕಾವೇರಿ ನೀರು ಬಿಡುಗಡೆ ಕುರಿತು CWRC ಆದೇಶ | ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ : 8 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ಧಾರ

Update: 2024-07-14 14:48 GMT

ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ ಸಿ)ಯು ಜುಲೈ ಅಂತ್ಯದವರೆಗೆ ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ ಪ್ರತಿದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಆದರೆ, ಜಲಾಶಯಗಳ ಸ್ಥಿತಿಗತಿ ಆಧರಿಸಿ ಒಂದು ಟಿಎಂಸಿ ಬದಲು ನಿತ್ಯ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್ ಸಿ) ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರವಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ತಮಿಳುನಾಡಿಗೆ ಜುಲೈ ಅಂತ್ಯದವರೆಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುವುದರ ಬದಲಾಗಿ ಸದ್ಯದ ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳ ಜಲಸ್ಥಿತಿಗತಿ ಆಧರಿಸಿ ನಿತ್ಯ 8 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧರಿಸಲಾಗಿದೆ. ಅಲ್ಲದೆ, ನಿತ್ಯ ಒಂದು ಟಿಎಂಸಿ ನೀರು ಬಿಡುವುದಕ್ಕಾಗುವುದಿಲ್ಲವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ)ಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಮುಖ್ಯಮಂತ್ರಿ ತಿಳಿಸಿದರು.

ಮಳೆಯ ಪ್ರಮಾಣ ಕಡಿಮೆ ಆದಲ್ಲಿ ನೀರು ಹರಿಯುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲಾಗುವುದು. ಉತ್ತಮ ಮಳೆಯಾದಲ್ಲಿ ನಿಗದಿಪಡಿಸಿದಷ್ಟು ನೀರು ಹರಿಸಲಾಗುವುದು. ಕಾವೇರಿ ನೀರು ನಿಯಂತ್ರಣ ಸಮಿತಿಯ ಜು.12ರಂದು ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ 1 ಟಿಎಂಸಿಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿದೆ. ಸಾಮಾನ್ಯ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಬಿನಿ ಜಲಾಶಯ ಭರ್ತಿಯಾಗಿದ್ದು, ಕಳೆದ ಎರಡು ದಿನ 20 ಸಾವಿರ, 19 ಸಾವಿರ ಹಾಗೂ ಇಂದು 13 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿದುಹೋಗಿದೆ. ವಕೀಲರ ತಂಡದ ಸಲಹೆ ಪ್ರಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸದ್ಯ ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳಲ್ಲಿ ಶೇ.63ರಷ್ಟು ನೀರು ಸಂಗ್ರಹವಾಗಿದೆ ಅಷ್ಟೇ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ನೀರು ಒಳಹರಿವಿಕೆಯ ಪ್ರಮಾಣ ಕಡಿಮೆಯಾಗಿದೆ. ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜು.12ರಂದು ಸಭೆ ನಡೆಸಿ ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಹಿನ್ನೆಲೆಯಲ್ಲಿ ರವಿವಾರ ಸರ್ವಪಕ್ಷ ಸಭೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಸೇರಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯದ ಸ್ಥಿತಿಯನ್ನು ಸಭೆಯ ಮುಂದಿಟ್ಟಿದ್ದೇವೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಾತರಕಿ, ವಿಪಕ್ಷ ನಾಯಕ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಅನೇಕರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್. ಕೆ.ಎಚ್. ಮುನಿಯಪ್ಪ, ಎನ್.ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ವೆಂಕಟೇಶ್, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರು, ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News