ಬೆಂಗಳೂರು: ಶಿಕ್ಷಕಿ ದಲಿತೆ ಎಂಬ ಕಾರಣಕ್ಕೆ ಗ್ರಾಮಸ್ಥರಿಂದ ಅಂಗನವಾಡಿ ಪ್ರವೇಶಕ್ಕೆ ನಿರಾಕರಣೆ; ಆರೋಪ

Update: 2023-07-29 17:13 GMT

ಸಾಂದರ್ಭಿಕ ಚಿತ್ರ (Credit: PICXY.COM/MUNNA)  

ಬೆಂಗಳೂರು: ಅಂಗನವಾಡಿ ಶಿಕ್ಷಕಿಯೊಬ್ಬರಿಗೆ ದಲಿತೆ ಎಂಬ ಕಾರಣಕ್ಕೆ ಗ್ರಾಮಸ್ಥರು ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ್ದಾರೆನ್ನಲಾದ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

‘‘ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜು.31ರಂದು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿ ಶಿಕ್ಷಕಿಗೆ ಕೆಲಸಕ್ಕೆ ಅನುವು ಮಾಡಿಕೊಡಲಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್.ಎಸ್ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೆಳೆಕೋಟೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಮನವರಿಕೆ ಮಾಡಿ ಶಿಕ್ಷಕಿಗೆ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಠ ಜಾತಿಗೆ ಸೇರಿದ ಶಿಕ್ಷಕಿ ಆನಂದಮ್ಮ ರಾಜಘಟ್ಟದಲ್ಲಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಅಂಗನವಾಡಿ ಶಿಕ್ಷಕಿಯಾಗಿ ಭಡ್ತಿ ನೀಡಿ, ಮೆಳೇಕೋಟೆ ಗ್ರಾಮಕ್ಕೆ 2022ರ ಸೆಪ್ಟೆಂಬರ‌್ನಲ್ಲಿ ವರ್ಗಾವಣೆ ಮಾಡಲಾಗಿತ್ತು.10 ತಿಂಗಳಿಂದ ಅವರು ಕೇಂದ್ರಕ್ಕೆ ಪ್ರವೇಶಿಸಲಾಗದೇ ಹೊರಗೇ ನಿಲ್ಲುತ್ತಿದ್ದಾರೆಂದು ತಿಳಿದುಬಂದಿದೆ.

“ಎಸ್‌ಸಿ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ನನ್ನನ್ನು ಅಂಗನವಾಡಿಯಲ್ಲಿ ಕೆಲಸ ಮಾಡಲು ಗ್ರಾಮಸ್ಥರು ಬಿಡುತ್ತಿಲ್ಲ. ಹಲವಾರು ಬಾರಿ ಅಂಗನವಾಡಿ ಕೇಂದ್ರವನ್ನು ಪ್ರವೇಶಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ತಡೆಯುತ್ತಿದ್ದು, 10 ತಿಂಗಳಿಂದ ಇಲ್ಲಿಗೆ ಬರುತ್ತಿದ್ದೇನೆ” ಎಂದು ಶಿಕ್ಷಕಿ ಆನಂದಮ್ಮ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News