ಅಕ್ಟೋಬರ್ 17 ರಿಂದ 21 ರವರೆಗೆ ದಸರಾ ಕವಿಗೋಷ್ಠಿ: ಕವಿ ಜಯಂತ್ ಕಾಯ್ಕಿಣಿ ಉದ್ಘಾಟನೆ

Update: 2023-10-11 12:51 GMT

ಮೈಸೂರು,ಅ.11: ಈ ಬಾರಿಯ ದಸರಾ ಮಹೋತ್ಸವದ ಕವಿಗೋಷ್ಠಿ ವೈವಿಧ್ಯಪೂರ್ಣವಾಗಿದೆ. ಅ. 17ರಿಂದ 21ರವರೆಗೆ 7 ವಿಭಾಗಗಳಲ್ಲಿ ಕವಿಗೋಷ್ಠಿ ಜರುಗಲಿದೆ. 250ಕ್ಕೂ ಹೆಚ್ಚು ಭಾಗಿಗಳು ಪಾಲ್ಗೊಳ್ಳುತ್ತಿದ್ದಾರೆ.

ನಗರ ಪಾಲಿಕೆ ಕೌನ್ಸಿಲ್‌ ಸಭಾಂಗಣದಲ್ಲಿ ಬುಧವಾರ ದಸರಾ ಕವಿಗೋಷ್ಠಿ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ. ದಾಸೇಗೌಡ ಪೋಸ್ಟರ್‌ ಲೋಕಾರ್ಪಣೆ ಮಾಡಿ ಈ ಬಗ್ಗೆಮಾಹಿತಿ ನೀಡಿದರು. 

ಅ. 17ರಂದು ಬೆಳಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ಕಾವ್ಯ ಸಂಭ್ರಮವನ್ನು ಕವಿ ಜಯಂತ ಕಾಯ್ಕಿಣಿ ಉದ್ಘಾಟಿಸುವರು. ಶಾಸಕ ಕೆ. ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಸಾಹಿತಿ ಕುಂ. ವೀರಭದ್ರಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು. ಗುರುರಾಜ್‌ ಮೈಸೂರು, ದೇವಾನಂದ ವರಪ್ರಸಾದ್‌ ತಂಡದವರು ಜಾನಪದ ಗಾಯನ ಇರಲಿದೆ. ಅ. 18ರಂದು ಬೆಳಗ್ಗೆ 11 ಗಂಟೆಗೆ ರಾಣಿಬಹದ್ದೂರ್‌ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿಯನ್ನು ಶಾಸಕ ಹರೀಶ್‌ಗೌಡ ಉದ್ಘಾಟಿಸುವರು. ಕವಯತ್ರಿ ಡಾ.ಎನ್‌.ಕೆ. ಲೋಲಾಕ್ಷಿ, ಮಕ್ಕಳ ಸಾಹಿತಿ ಫಾ.ಗು. ಸಿದ್ದಾಪುರ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಸವಿತಾ ನಾಗಭೂಷಣ ವಹಿಸುವರು. ಕಲಾವಿದ ಚಿತ್ಕಾಳ ಬಿರಾದರ್‌, ಕವಿ ಸತೀಶ್‌ ಕುಲಕರ್ಣಿ ಭಾಗವಹಿಸುವರು ಎಂದು ತಿಳಿಸಿದರು.

ಅ. 19ರಂದು ಬೆಳಗ್ಗೆ 11 ಗಂಟೆಗೆ ರಾಣಿಬಹದ್ದೂರ್‌ ಸಭಾಂಗಣದಲ್ಲಿ ಪ್ರಾದೇಶಿಕ ಕವಿಗೋಷ್ಠಿಯನ್ನು ಸಾಹಿತಿ ಎಸ್‌‍.ಜಿ.ಸಿದ್ಧರಾಮಯ್ಯ ಉದ್ಘಾಟಿಸುವರು. ಚ.ಸರ್ವಮಂಗಳ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಎಚ್‌.ಟಿ. ಪೋತೆ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಡಾ.ವಿನಯಾ ಒಕ್ಕುಂದ ವಹಿಸುವರು. ಶಾಸಕ ಶ್ರೀವತ್ಸ, ಕವಿ ಡಾ.ಎಚ್‌.ಸಿ. ಸತ್ಯನಾರಾಯಣ ಭಾಗವಹಿಸುವರು. ಅ. 19ರಂದು ಸಂಜೆ 7 ಗಂಟೆಗೆ ಕ್ಲಾಸಿಕ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಉರ್ದು ಕವಿಗೋಷ್ಠಿ ನಡೆಯಲಿದೆ. ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಉದ್ಘಾಟಿಸುವರು. ಶಾಸಕರಾದ ತನ್ವೀರ್‌ ಸೇಠ್‌, ಜಿ.ಟಿ.ದೇವೇಗೌಡ ಭಾಗವಹಿಸುವರು. ಅ. 21ರಂದು ಕಲಾಮಂದಿರದಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದೆ. ಕವಯತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸುವರು. ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು. ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ ಕೆ.ಹರೀಶ್‌ಗೌಡ ಭಾಗವಹಿಸುವರು ಎಂದು ಹೇಳಿದರು.

ದಸರಾ ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ವಿಜಯಕುಮಾರಿ ಎಸ್‌‍.ಕರಿಕಲ್‌, ಕಾರ್ಯದರ್ಶಿ ಗಿರಿಧರ್‌ ಭಾಗವಹಿಸಿದ್ದರು.

ಹಾಸ್ಯ-ಚುಟುಕು ಕವಿಗೋಷ್ಠಿಯಲ್ಲಿ 20, ಚಿಗುರು ಕವಿಗೋಷ್ಠಿ 40, ಮಹಿಳಾ ಕವಿಗೋಷ್ಠಿ 40, ಪ್ರಾದೇಶಿಕ ಕವಿಗೋಷ್ಠಿಯಲ್ಲಿ 42, ಯುವ ಕವಿಗೋಷ್ಠಿಯಲ್ಲಿ 40, ಉರ್ದು ಕವಿಗೋಷ್ಠಿಯಲ್ಲಿ 20, ಪ್ರಧಾನ ಕವಿಗೋಷ್ಠಿಯಲ್ಲಿ 40 ಕವಿಗಳು ಪಾಲ್ಗೊಳ್ಳುವರು.

ದಸರಾ ಕವಿಗೋಷ್ಠಿಗೆ 35 ಲಕ್ಷ ರೂ. ಅನುದಾನ ಕೇಳಲಾಗಿದೆ. ಇಷ್ಟು ಅನುದಾನ ಸಿಗಲಿದೆ. ಕಳೆದ ದಸರಾಗಿಂತ ಕವಿಗಳಿಗೆ ಹೆಚ್ಚಿನ ಗೌರವ ಧನ ನೀಡಲಾಗುತ್ತಿದೆ. ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಕವಿಗಳಿಗೂ ಆಹ್ವಾನ ನೀಡಲಾಗಿದೆ. ನಿಯಮಾನುಸಾರವೇ ಕವಿಗಳ ಆಯ್ಕೆ ಮಾಡಲಾಗಿದೆ.

-ಡಾ.ಎಂ. ದಾಸೇಗೌಡ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News