ಜಿಂಕೆ ಬೇಟೆ; ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ
ಮಡಿಕೇರಿ ನ.4 : ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವಿರಾಜಪೇಟೆ ಫೋಲೀಸ್ ಅರಣ್ಯ ಸಂಚಾರಿ ದಳ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದೆ.
ಬೇಟೋಳಿ ಗ್ರಾಮದ ನಿವಾಸಿ ವಿರಾಜಪೇಟೆಯ ಬೇಕರಿಯೊಂದರ ಮಾಲಕ ಎಂ.ಎಂ.ಅಜೀಜ್(45) ಹಾಗೂ ನೆಹರು ನಗರ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ ಅಲಿಯಾಸ್ ಜಂಶೀರ್(32) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಎರಡು ಜಿಂಕೆ ತಲೆ, 44 ಕೆ.ಜಿ ಮಾಂಸ, 1 ಬಂದೂಕು, ಮಾಂಸ ಸಾಗಾಟಕ್ಕೆ ಬಳಸಿದ 1 ಕಾರನ್ನು ವಶಕ್ಕೆ ಪಡೆಯಲಾಗಿದೆ.
ನ.3ರಂದು ವಿರಾಜಪೇಟೆ ಪೆರುಂಬಾಡಿ ಕಡೆಯಿಂದ ಬಿಟ್ಟಂಗಾಲ ಕಡೆಗೆ ಇನೋವಾ ಕಾರಿನಲ್ಲಿ ವನ್ಯಜೀವಿ ಮಾಂಸ ಸಾಗಿಸುತ್ತಿರುವ ಕುರಿತು ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ಎಂ.ಸಿ ಮುತ್ತಣ್ಣ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಹೆಗ್ಗಳ ಬಳಿ ಕಾರು ತಡೆದು ಪರಿಶೀಲಿಸಿದ ಸಂದರ್ಭ ಎರಡು ಜಿಂಕೆಯ ಒಟ್ಟು 44 ಕೆ.ಜಿ ಮಾಂಸ, ಪ್ಲಾಸ್ಟಿಕ್ ಚೀಲದಲ್ಲಿ ಇದ್ದ 2 ಜಿಂಕೆಯ ತಲೆಗಳು, 1 ಒಂಟಿ ನಳಿಕೆ ಕೋವಿ, 2 ಕತ್ತಿ, 3 ಚೂರಿಗಳು ಪತ್ತೆಯಾಗಿದ್ದು, ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ, ಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಮೂವರು ಆರೋಪಿಗಳಾದ ಚಾಮಿಯಾಲ ಮೈತಾಡಿಯ ಅಜಿಜ್(ಅಜ್ಜು), ಬೇಟೋಳಿ ಗುಂಡಿಗೆರೆಯ ಅಶ್ರಫ್ ಅಲಿಯಾಸ್ ಅಚ್ಚು ಹಾಗೂ ಬೇಟೋಳಿ ಗುಂಡಿಗೆರೆಯ ಶಿಯಾಬ್ ತಲೆಮರೆಸಿಕೊಂಡಿದ್ದಾರೆ.
ಮಾಕುಟ್ಟ ರಕ್ಷಿತಾರಣ್ಯ ಪ್ರದೇಶದಲ್ಲಿ ಜಿಂಕೆಗಳನ್ನು ಬೇಟೆಯಾಡಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.