ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನಿರಾಕರಣೆ: ಖಾಸಗಿ ಶಾಲೆಗೆ 1 ಲಕ್ಷ ರೂ.ದಂಡ ವಿಧಿಸಿದ ಹೈಕೋರ್ಟ್

Update: 2024-01-06 13:37 GMT

ಬೆಂಗಳೂರು: ಅಧ್ಯಯನ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಕೆಲ ನಿಯಮಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ 9ನೇ ಕ್ಲಾಸ್‍ನ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ನಗರದ ಖಾಸಗಿ ಶಾಲೆಗೆ ಹೈಕೋರ್ಟ್ 1ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.

ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ವಕೀಲರ ವಾದ ಆಲಿಸಿದ ನ್ಯಾಯಪೀಠವು 9 ಮತ್ತು 10ನೇ ತರಗತಿ ಶಿಕ್ಷಣದ ಪ್ರಮುಖ ಘಟ್ಟಗಳಾಗಿವೆ ಎಂಬುದಾಗಿ ತಿಳಿದಿರುವ ಪೋಷಕರು, ಯಾವುದೇ ತರಗತಿಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಪ್ರತಿವಾದಿ ಶಾಲೆ ಅರ್ಜಿದಾರರ ಮಗು ಹಾಗೂ ಇತರೆ ಮಕ್ಕಳ ಪೋಷಕರಿಂದ ಮುಚ್ಚಳಿಕೆ ಸಲ್ಲಿಸದ ಕಾರಣ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಹೀಗಿರುವಾಗ ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡು ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥ ಪಡಿಸಿದಲ್ಲಿ ನ್ಯಾಯ ಒದಗಿಸಿದಂತಾಗುವುದಿಲ್ಲ.

ಜತೆಗೆ ಭವಿಷ್ಯದಲ್ಲಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಇತರೆ ಯಾವುದೇ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯದೊಂದಿಗೆ ಆಟವಾಡುವುದಕ್ಕೆ ಮುಂದಾಗಬಾರದು ಎಂದು ತಿಳಿಸಿ 1 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣವೇನು?: ಪ್ರಕರಣದಲ್ಲಿ ಅರ್ಜಿದಾರರ ಪುತ್ರಿ ಶಾಲೆಯ ನಿಯಮಗಳ ವಿರುದ್ಧ ನಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಶಾಲೆಯು 10 ಸಾವಿರ ರೂ.ದಂಡ ಮತ್ತು ಮುಚ್ಚಳಿಕೆ ನೀಡಬೇಕು ಎಂದು ವಿದ್ಯಾರ್ಥಿನಿಗೆ ಸೂಚನೆ ನೀಡಿತ್ತು. ದಂಡ ಮತ್ತು ಮುಚ್ಚಳಿಕೆ ನೀಡದ ಹಿನ್ನೆಲೆಯಲ್ಲಿ ತರಗತಿಗಳ ಹಾಜರಿಗೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News