ಲೋಕಸಭಾ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಇನ್ನೂ ಅಂತಿಮ ಹಂತ ತಲುಪಿಲ್ಲ: ಯಡಿಯೂರಪ್ಪ

2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬ ಪ್ರತಿಪಾದನೆಗಳ ನಡುವೆಯೇ, ಈ ಮಾತುಕತೆ ಇನ್ನೂ ಅಂತಿಮ ಹಂತ ತಲುಪಿಲ್ಲ ಎಂದು ರವಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ

Update: 2023-09-10 13:20 GMT

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬ ಪ್ರತಿಪಾದನೆಗಳ ನಡುವೆಯೇ, ಈ ಮಾತುಕತೆ ಇನ್ನೂ ಅಂತಿಮ ಹಂತ ತಲುಪಿಲ್ಲ ಎಂದು ರವಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತರ ಜವಾಬ್ದಾರಿಗಳಲ್ಲಿ ಮಗ್ನರಾಗಿರುವುದರಿಂದ, ಈ ವಿಷಯವನ್ನು ಅವರು ಇನ್ನೊಂದೆರಡು ದಿನಗಳಲ್ಲಿ ಚರ್ಚಿಸಬಹುದು ಎಂದು ಯಡಿಯೂರಪ್ಪ ಹೇಳಿದ್ದಾರೆ. “ಮೋದಿಯವರು ಇತರ ವಿಷಯಗಳಲ್ಲಿ ಮಗ್ನರಾಗಿರುವುದರಿಂದ ಇನ್ನೆರಡು ದಿನಗಳಲ್ಲಿ ಈ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಈ ಕುರಿತು ಯಾವುದೇ ಚರ್ಚೆಯಾಗಿಲ್ಲ. ನಾವು ಕಾದು ನೋಡಬೇಕಿದೆ” ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಅವರು,”ಇದಕ್ಕೂ ಮುನ್ನ ನಾನು ಮಾತನಾಡಿದಾಗ ಈ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿರಲಿಲ್ಲ. ಈಗಲೂ ಕೂಡಾ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಈ ಕುರಿತು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಇನ್ನಿತರ ನಾಯಕರು ಚರ್ಚಿಸಿ, ನಿರ್ಧರಿಸಲಿದ್ದು, ಅಲ್ಲಿಯವರೆಗೆ ನಾವು ಕಾಯಬೇಕಿದೆ. ಮೋದಿ ಮತ್ತು ಇತರರು ಇಂದು ಮತ್ತು ನಾಳೆ ಕಾರ್ಯನಿರತರಾಗಿರುತ್ತಾರೆ ಎಂದು ನನಗನ್ನಿಸುತ್ತಿರುವುದರಿಂದ, ಈ ಕುರಿತು ಇನ್ನು ಎರಡ್ಮೂರು ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದಿದ್ದಾರೆ.

ಇದಕ್ಕೂ ಮುನ್ನ, ಲೋಕಸಭಾ ಚುನಾವಣೆಗೆ ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಶುಕ್ರವಾರ ಯಡಿಯೂರಪ್ಪ ಪ್ರಕಟಿಸಿದ್ದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News