ಕೋವಿಡ್ ವೇಳೆ ಕಾರ್ಮಿಕರಿಂದ ವಸೂಲಿಗಿಳಿದಿದ್ದ ಬಿಜೆಪಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೋವಿಡ್ ಸಮಯದಲ್ಲಿ ಕಾರ್ಮಿಕರು ಊರಿಗೆ ಹಿಂದಿರುಗುವಾಗ ಬಿಜೆಪಿ ಸರಕಾರ ಮೂರುಪಟ್ಟು ಟಿಕೆಟ್ ದರ ಹಣ ವಸೂಲಿಗೆ ಮುಂದಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23ನೆ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಕಟ್ಟಡ ಕಾರ್ಮಿಕರು ಊರಿಗೆ ಹಿಂದಿರುಗುವಾಗ ಬಿಜೆಪಿ ಸರಕಾರ ಮೂರುಪಟ್ಟು ಟಿಕೆಟ್ ದರ ಹಣ ವಸೂಲಿಗೆ ಮುಂದಾಗಿತ್ತು. 700 ರೂ. ಇದ್ದ ಟಿಕೆಟ್ ದರವನ್ನು 2100 ರೂ. ಮಾಡಿತ್ತು. ಯಾದಗಿರಿ ಭಾಗದವರು ಬಂದು ನನ್ನನ್ನು ಭೇಟಿ ಮಾಡಿ ಈ ವಿಚಾರ ತಿಳಿಸಿದರು.
ಈ ಕಾರ್ಮಿಕರು ಬೆಂಗಳೂರು ಬೆಳೆಸಲು ಇಲ್ಲಿಗೆ ಬಂದವರು. ಕೆಲಸ ಇಲ್ಲದಾಗ ಅವರು ಮೂರುಪಟ್ಟು ಹಣ ಎಲ್ಲಿಂದ ತರುತ್ತಾರೆ. ಹೀಗಾಗಿ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳುಹಿಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇ. ಆದರೂ ಸ್ಪಂದಿಸಿಲ್ಲ. ಮರುದಿನ ನಾನು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ನಾನು ಆಗಷ್ಟೇ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಸರಕಾರ ಈ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಬೇಕು. ಇಲ್ಲದಿದ್ದರೆ, ನಾನೇ ಪಕ್ಷದ ಪರವಾಗಿ 1 ಕೋಟಿ ನೀಡುವುದಾಗಿ ಘೋಷಣೆ ಮಾಡಿದೆ. ನಮ್ಮ ಈ ತೀರ್ಮಾನ ಇಡೀ ದೇಶಕ್ಕೆ ಮಾದರಿಯಾಯಿತು. ಒಂದು ವಾರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ರೈಲ್ವೇ ಇಲಾಖೆ ಕೂಡ ಉಚಿತ ರೈಲು ಸಂಚಾರ ವ್ಯವಸ್ಥೆ ನೀಡಿತು ಎಂದು ಅವರು ಹೇಳಿದರು.
ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರನ್ನು ಕೇವಲ ಕಾರ್ಮಿಕರು ಎನ್ನುವುದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ನನ್ನ ಪ್ರಕಾರ ನೀವೆಲ್ಲರೂ ದೇಶದ ನಿರ್ಮಾತೃಗಳು ಎಂದ ಅವರು, ನಮ್ಮ ಮನೆ, ಈ ಕಟ್ಟಡಗಳು ಇಷ್ಟು ಸುಂದರವಾಗಿ ಕಾಣಲು ನೂರಾರು ಜನರ ಪರಿಶ್ರಮ ಇರುತ್ತದೆ. ಈ ದೇಶ ಎಷ್ಟೇ ಬೆಳೆದರೂ ನಿಮ್ಮ ಶ್ರಮ ಹಾಗೂ ಬೆವರಿಗೆ ನಾವು ಬೆಲೆ ಕಟ್ಟಲು ಆಗುವುದಿಲ್ಲ ಎಂದು ಅವರು ನುಡಿದರು.
ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಚಿವರು ವಿವರಿಸಿದ್ದಾರೆ. ನೀವು ನಿಮ್ಮ ಸಲಹೆಗಳನ್ನು ಸಚಿವರುಗಳಿಗೆ ನೀಡಿ. ನಿಮ್ಮ ಸಲಹೆ ಸ್ವೀಕಾರ ಮಾಡಿ ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಲಾಗುವುದು. ನಿಮ್ಮ ಮಕ್ಕಳು ದೇಶದ ಆಸ್ತಿ. ಅವರ ಭವಿಷ್ಯ ದೇಶದ ಆಸ್ತಿ. ಅಧಿಕಾರವಂತರು, ಶ್ರೀಮಂತರ ಮಕ್ಕಳು ದೊಡ್ಡವರಾಗುವುದಕ್ಕಿಂತ ನಿಮ್ಮ ಮಕ್ಕಳು ದೊಡ್ಡವರಾಗಿ ಬೆಳೆಯಬೇಕು. ಆಗ ಸಮಾಜ ಬೆಳೆಯುತ್ತದೆ ಎಂದು ನಮ್ಮ ಸರಕಾರ ನಂಬಿಕೆ ಇಟ್ಟುಕೊಂಡಿದೆ ಎಂದು ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022 ಮತ್ತು 23ನೇ ಸಾಲಿನ ಶೈಕ್ಷಣಿಕ ಸಹಾಯ ಧನ ಬಿಡುಗಡೆಮಾಡಿ ಮಾತನಾಡಿದೆ.
— DK Shivakumar (@DKShivakumar) November 9, 2023
ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇವರನ್ನು ಕಾರ್ಮಿಕರು ಎಂದು ಕರೆಯಲು ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ.… pic.twitter.com/yTKaQzdtoI