ಮಹಿಷಿ ವರದಿಗೆ ಕಾಯ್ದೆ ರೂಪ ನೀಡಿ : ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

Update: 2025-03-03 19:28 IST
ಮಹಿಷಿ ವರದಿಗೆ ಕಾಯ್ದೆ ರೂಪ ನೀಡಿ : ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

ಡಾ.ಪುರುಷೋತ್ತಮ ಬಿಳಿಮಲೆ

  • whatsapp icon

ಬೆಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರಕ್ಕೆ ಸಲ್ಲಿಸಿರುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಕಾಯ್ದೆಯ ರೂಪ ಒದಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ಸಲ್ಲಿಸಿರುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಅನುಷ್ಠಾನ ಯೋಗ್ಯವಾದ ಸಲಹೆಗಳನ್ನು ನೀಡಲಾಗಿದೆ. ಈ ಅಂಶಗಳ ಬಗ್ಗೆ ಸರಕಾರ ತುರ್ತಾಗಿ ಗಮನ ಹರಿಸುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಕನ್ನಡದ ಉಳಿವು ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಠಿಯಿಂದ ಇದು ಮಹತ್ವದಾಗಿದೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಸರೋಜಿನಿ ಮಹಿಷಿ ವರದಿಗೆ ಕಾಯ್ದೆ ರೂಪ ನೀಡಲು ಸರಕಾರ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ವ್ಯವಹರಿಸುವ ಬ್ಯಾಂಕುಗಳಲ್ಲಿ ನೇಮಕ ಹೊಂದುವ ಅಭ್ಯರ್ಥಿಗಳಿಗೆ ಕನ್ನಡದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತು. ಸರಕಾರಿ ವಲಯದ ಉದ್ಯಮಗಳಲ್ಲಿ ಕನ್ನಡಿಗರ ಆದ್ಯತೆಯ ಆಯ್ಕೆ, ಅಪ್ರೆಂಟಿಸ್ ಆಯ್ಕೆಯಲ್ಲಿ, ಕಾರ್ಮಿಕರ ಗುತ್ತಿಗೆ, ದಿನಗೂಲಿ ನೌಕರರ ನೇಮಕಾತಿಗಳಲ್ಲಿ ಕೇವಲ ಕನ್ನಡಿಗರಿಗೆ ಅವಕಾಶ, ತಂತ್ರಜ್ಞಾನ ಬೆಳವಣಿಗೆಗೆ ಅನುಗುಣವಾಗಿ ಉದ್ಯೋಗ ತರಬೇತಿಗೆ ಪ್ರೋತ್ಸಾಹ ಸೇರಿದಂತೆ ಅನುಷ್ಠಾನ ಯೋಗ್ಯವಾದ 14 ಅಂಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ಸಲ್ಲಿಸಿರುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಕಾಯ್ದೆಯ ರೂಪವನ್ನು ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಬೆಳಗಾವಿಯಲ್ಲಿ ಕರ್ನಾಟಕದ ಬಸ್ ನಿರ್ವಾಹಕರ ಮೇಲೆ ಭಾಷಾ ವೈಷಮ್ಯದ ಹಿನ್ನೆಲೆಯಲ್ಲಿ ನಡೆಸಿರುವ ದಾಳಿ ಖಂಡನೀಯವಾದುದು ಎಂದು ಹೇಳಿದ್ದಾರೆ.

‘ನಿರ್ವಾಹಕರ ಮೇಲಿನ ಮರಾಠಿಗರ ದಾಳಿಯು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ನೇರ ಆಕ್ರಮಣವಾಗಿರುತ್ತದೆ. ಈ ಪ್ರಕರಣವನ್ನು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಿ, ಕನ್ನಡಿಗ ಸಿಬ್ಬಂದಿಯ ನೋವಿಗೆ ಸ್ಪಂದಿಸಬೇಕಾಗಿರುವುದು ಕನ್ನಡಿಗರಾಗಿ ನಮ್ಮ ಜವಾಬ್ದಾರಿಯಾಗಿರುತ್ತದೆ’

-ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News