ರಾಜ್ಯಪಾಲರಿಗೆ ಜೆಡಿಎಸ್ ಪಕ್ಷದಿಂದ ಬರ ಅಧ್ಯಯನ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯಾದ್ಯಂತ ಜೆಡಿಎಸ್ ಪಕ್ಷ ನಡೆಸಿದ್ದ ಬರ ಅಧ್ಯಯನ ವರದಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನಿಯೋಗವು ರವಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿತು.
ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರದಿಂದ ಅನುದಾನ ಕೊಡಿಸಲು ಮಧ್ಯಪ್ರದೇಶ ಮಾಡಬೇಕೆಂದು ಎಚ್.ಡಿ.ಕುಮಾರಸ್ವಾಮಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲರು, ನಿಮ್ಮ ಅಹವಾಲನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಮಾನ್ಸೂನ್ ವೈಫಲ್ಯದಿಂದ ರಾಜ್ಯದಲ್ಲಿ ಒಟ್ಟು 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 46.09 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರಾಜ್ಯ ಸರಕಾರವೇ ಅಂದಾಜು ಮಾಡಿರುವಂತೆ ರಾಜ್ಯದಲ್ಲಿ ಒಟ್ಟು 35.162.02 ಕೋಟಿ ರೂಪಾಯಿಯಷ್ಟು ಬೆಳೆ ಹಾನಿ ಆಗಿದ್ದು, ಎನ್‍ಡಿಆರ್ ಎಫ್ ಮಾನದಂಡದ ಅಡಿಯಲ್ಲಿ ಕೇಂದ್ರ ಸರಕಾರದಿಂದ 18,171.44 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರಕಾರ ಕೋರಿದೆ.
ಆದರೆ, ಇಷ್ಟು ಮೊತ್ತದ ಪರಿಹಾರದಿಂದ ರಾಜ್ಯದ ರೈತರ ಬವಣೆ ನೀಗುವುದಿಲ್ಲ. ಕೃಷಿಕರು ಅನುಭವಿಸಿರುವ ಒಟ್ಟಾರೆ ನಷ್ಟದಲ್ಲಿ ಶೇ.10ರಷ್ಟು ಪರಿಹಾರವೂ ಅವರಿಗೆ ಸಿಗುವುದಿಲ್ಲ. ಆದ್ದರಿಂದ ಈ ಹಿಂದೆ ನೀಡಿದಂತೆ ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ ಹೆಚ್ಚುವರಿ ಪರಿಹಾರವಾಗಿ 17,500 ರೂಪಾಯಿ ನೀಡಬೇಕು. ಈ ನಿಟ್ಟಿನಲ್ಲಿ ತಾವು ರಾಜ್ಯ ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಬರ ಪರಿಹಾರ ನಿರ್ವಹಣೆಯಲ್ಲಿ ವಿಫಲ: ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅನೇಕ ಜಿಲ್ಲೆಗಳಲ್ಲಿ ಕುಡಿಯುವ ಸಮಸ್ಯೆ ಇದೆ. ಜಾನುವಾರುಗಳು ಸಂಕಷ್ಟದಲ್ಲಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ನೀರಿನ ಸಂಕಷ್ಟ ಎದುರಾಗಿದೆ ಎಂದು ರಾಜ್ಯಪಾಲರ ಗಮನಕ್ಕೆ ತಂದರು.
ಮನವಿಯ ಪ್ರಮುಖ ಅಂಶಗಳು
ಕೇಂದ್ರ ಸರಕಾರದಿಂದ ಎನ್.ಡಿ.ಆರ್.ಎಫ್ ಮಾನದಂಡದ ಅನ್ವಯ ಕೂಡಲೇ ರಾಜ್ಯಕ್ಕೆ 17,181.44 ಕೋಟಿ ರೂಪಾಯಿ ಬಿಡುಗಡೆ ಮಾಡಿಸಲು ರಾಜ್ಯಪಾಲರು ಮನವೊಲಿಸಬೇಕು.
ಕುಡಿಯುವ ನೀರು, ಜಾನುವಾರುಗಳ ಸಂರಕ್ಷಣೆ, ಕೃಷಿ ಕಾರ್ಮಿಕರಿಗೆ ನೆರವು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವು ನೀಡುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು.
ವಿಮಾ ಕಂಪನಿಗಳು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮ ವಹಿಸಬೇಕು.
ಬೆಂಗಳೂರು ನಗರ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆ ಏಕೈಕ ಪರಿಹಾರ ಆಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರದ ಒಪ್ಪಿಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮ ವಹಿಸಬೇಕು.