ಶಾಲಾ ಬ್ಯಾಗ್ ತೂಕ ಇಳಿಸಿ ಶಿಕ್ಷಣ ಇಲಾಖೆ ಆದೇಶ: ಮುಂದಿನ ವರ್ಷದಿಂದ ಜಾರಿ

Update: 2023-12-19 14:32 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ವರ್ಷದಿಂದ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕ ಇಳಿಸುವ ಕುರಿತು ಶಿಕ್ಷಣ ಇಲಾಖೆ ಹೊಸ ನಿರ್ಧಾರ ಕೈಗೊಂಡಿದೆ. 1 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಇಲಾಖೆ ಅದೇಶಿಸಿದೆ.

ಶ್ರೀ ಯಶಪಾಲ ಶರ್ಮಾ ಸಮಿತಿಯ “ಹೊರೆಯಿಲ್ಲದ ಕಲಿಕೆ" 1993 ರ ವರದಿ ಅಧ್ಯಯನದ ಆಧಾರದ ಮೇಲೆ ಪುಸ್ತಕದ ಭಾರ ಇಳಿಸಲು ಶಾಲಾ ಶಿಕ್ಷಣ ಇಲಾಖೆ ಕ್ರಮ ವಹಿಸುತ್ತಿದೆ. ಹಾಗಾಗಿ ಪಠ್ಯಪುಸ್ತಕಗಳು ಭಾಗ-1 ಮತ್ತು ಭಾಗ-2 ಎಂದು ಎರಡು ವಿಭಾಗಗಳಾಗಿ ವಿಂಗಡನೆಯಾಗಲಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕ ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಶುರುವಾಗಲಿದೆ. ಅಂದರೆ ಎಸ್‍ಎ-1 ಹಾಗೂ ಎಸ್‍ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲಾಗುತ್ತದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ನಿರ್ಧಾರ ಕೈಗೊಂಡಿತ್ತು. ಈ ಪ್ರಕಾರ ತರಗತಿವಾರು 1.5 ಕೆಜಿಯಿಂದ ಗರಿಷ್ಠ ಐದು ಕೆಜಿ ವರೆಗೆ ಶಾಲಾ ಶಿಕ್ಷಣ ಇಲಾಖೆ ತೂಕ ನಿಗದಿ ಮಾಡಿತ್ತು. ಆದರೆ ಮುಂದಿನ ವರ್ಷದಿಂದ ಶೇ.50ರಷ್ಟು ಪಠ್ಯಪುಸ್ತಕದ ಹೊರೆ ಇಳಿಸಲು ನಿರ್ಧಾರ ಮಾಡಿದೆ.

ಈ ಮೂಲಕ ಶಾಲಾ ಮಕ್ಕಳು ಅರ್ಧವಾರ್ಷಿಕ ಪರೀಕ್ಷೆವರೆಗೆ ಒಂದು ಪಠ್ಯಪುಸ್ತಕ (ಭಾಗ-1). ಹಾಗೆಯೇ ದಸರಾ ರಜೆ ಬಳಿಕ ವಾರ್ಷಿಕ ಪರೀಕ್ಷೆವರೆಗೆ ಇನ್ನೊಂದು ಪಠ್ಯಪುಸ್ತಕ(ಭಾಗ-2) ಬಳಸುವ ಮೂಲಕ ಶಾಲಾ ಬ್ಯಾಗ್‍ನ ಹೊರೆ ಕಡಿಮೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News