ಹಾಸನ | ವೃದ್ಧೆಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಜೈಲು

Update: 2023-10-27 04:37 GMT
ಸಾಂದರ್ಭಿಕ ಚಿತ್ರ

ಹಾಸನ, ಅ.26: ವೃದ್ಧೆಯ ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹಾಸನ ತಾಲೂಕು ಕಟ್ಟಾಯ ಹೋಬಳಿ ಬನವಾಸಿ ಗ್ರಾಮದ ನಿವಾಸಿ ರಮೇಶ್ ಶಿಕ್ಷೆಗೆ ಒಳಗಾದ ಆರೋಪಿ. 2020ರ ಜುಲೈ 29ರಂದು ರಾತ್ರಿ ಆರೋಪಿ ರಮೇಶ್ 69 ವರ್ಷದ ವೃದ್ಧೆಯ ಮನೆಯೊಳಗೆ ನುಗ್ಗಿ ವೃದ್ಧೆಯನ್ನು ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಬಗ್ಗೆ ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್ .ಎ.ಹಿದಾಯತ್‌ ಉಲ್ಲಾ ಷರೀಫ್ ಅವರು ಪ್ರಕರಣದ ಎಲ್ಲ ಸಾಕ್ಷಿದಾರರು ಪೂರಕವಾಗಿ ಸಾಕ್ಷ್ಯ ನುಡಿದಿರುವ ಕಾರಣ ಆರೋಪಿಯ ಮೇಲಿರುವ ದೋಷಾರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ರಮೇಶ್‌ ಗೆ ಭಾರತೀಯ ದಂಡ ಸಂಹಿತೆ ಕಲಂ 376, 506, 323ರ ಅಡಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

 ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ನಾಗೇಂದ್ರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News