ಮಾನಸಿಕ ಖಿನ್ನತೆಯಿಂದ ಕರ್ತವ್ಯಕ್ಕೆ ಗೈರಾಗಿದ್ದ ಉದ್ಯೋಗಿ: ಮರು ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2023-11-02 18:39 GMT

ಬೆಂಗಳೂರು, ನ.2: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಅನುಮತಿ ಪಡೆದುಕೊಳ್ಳದೇ 632 ದಿನಗಳ ಕಾಲ ಸೇವೆಗೆ ಗೈರಾಗಿದ್ದ ಉದ್ಯೋಗಿಯೊಬ್ಬರನ್ನು ಸೇವೆಗೆ ಮರು ನೇಮಕ ಮಾಡುವಂತೆ ಕೆಪಿಟಿಸಿಎಲ್‍ಗೆ ನಿರ್ದೇಶಿಸಿದ್ದ ಹೈಕೋರ್ಟ್‍ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ವಜಾ ಮಾಡಿದೆ. ಈ ದಿನಗಳಲ್ಲಿ ಯಾರೂ ಉದ್ಯೋಗ ಬಿಡುವುದಿಲ್ಲ. ಕೆಪಿಟಿಸಿಎಲ್ ಸರಕಾರದ ಸಂಸ್ಥೆಯಾಗಿದ್ದು, ನೀವು ನ್ಯಾಯಯುತವಾಗಿ ವರ್ತಿಸಬೇಕು. ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಸಕಾರಣಗಳನ್ನು ನೀಡಿದೆ ಎಂದು ವಿಭಾಗೀಯ ಪೀಠ ಹೇಳಿದೆ.

ಉದ್ಯೋಗಿ ಎಸ್.ಕಿರಣ್ ಅವರನ್ನು ಸೇವೆಗೆ ಮರು ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದ ಕೆಪಿಟಿಸಿಎಲ್ ಅರ್ಜಿಯನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನೂ ಈಗ ವಿಭಾಗೀಯ ಪೀಠ ವಜಾ ಮಾಡಿದೆ. ಪ್ರತಿವಾದಿ ಕಿರಣ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಕರ್ತವ್ಯಕ್ಕೆ ಗೈರಾಗಿಲ್ಲ. ತಾನು ಗೈರಾಗಿದ್ದಕ್ಕೆ ಸಾಕಷ್ಟು ಸಕಾರಣಗಳನ್ನು ಅವರು ನೀಡಿದ್ದಾರೆ ಎಂದು ನ್ಯಾಯಪೀಠವು ಆದೇಶದಲ್ಲಿ ಹೇಳಿದೆ.

2008ರ ಜ.30ರಂದು ಕಿರಣ್ ಅವರು ಕೆಪಿಟಿಸಿಎಲ್‍ನಲ್ಲಿ ಸ್ಟೇಷನ್ ಅಟೆಂಡೆಂಟ್ ಆಗಿ (ಗ್ರೇಡ್-2) ಕೆಲಸ ಆರಂಭಿಸಿದ್ದರು. ಆನಂತರ 2010ರ ಬಳಿಕ ಅವರು ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಒಟ್ಟಾರೆ 632 ದಿನಗಳ ಕಾಲ ಅನುಮತಿ ಇಲ್ಲದೇ ಕರ್ತವ್ಯಕ್ಕೆ ಗೈರಾಗಿದ್ದರಿಂದ 2014ರ ಜನವರಿ 3ರಂದು ಕಿರಣ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಕಿರಣ್ ಪರ ವಕೀಲರು ವಾದಿಸಿ, ಕಿರಣ್ ಅವರು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಗೈರಾಗಿಲ್ಲ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ನಿರಂತರವಾಗಿ ಚಿಕಿತ್ಸೆಯಲ್ಲಿದ್ದರು. ಹಲವು ಬಾರಿ ಮನೆ ತೊರೆದಿದ್ದು, ಮನೆಯವರಿಗೆ ಅವರನ್ನು ಪತ್ತೆ ಮಾಡಲು ಕಷ್ಟವಾಗಿದೆ. ವೈದ್ಯಕೀಯ ಚಿಕಿತ್ಸೆ ಪಡೆದಿರುವ ದಾಖಲೆಗಳನ್ನೂ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News