‘ಆರೋಪಿ ಅಪ್ರಾಪ್ತರಲ್ಲ’ ಎಂದು ಖಾತ್ರಿಪಡಿಸಿಕೊಳ್ಳಿ: ಹೈಕೋರ್ಟ್ ನಿರ್ದೇಶನ

Update: 2024-01-14 14:02 GMT

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಹಾಜರುಪಡಿಸುವ ಆರೋಪಿಗಳು ಅಪ್ರಾಪ್ತ ವಯಸ್ಕರಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳು ಸೇರಿದಂತೆ ಎಲ್ಲ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

18 ರಿಂದ 22 ವರ್ಷದೊಳಗಿನ ಆರೋಪಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಿದಾಗ ವಯಸ್ಸಿಗೆ ಸಂಬಂಧಿಸಿದಂತೆ ದಾಖಲೆ ಪುರಾವೆಗಳನ್ನು ಒದಗಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ತನಿಖಾಧಿಕಾರಿಗಳು ಹಾಗೂ ಆರೋಪಿಗಳಿಗೆ ಸೂಚಿಸಬೇಕು ಎಂದು ಕೋರ್ಟ್ ತಿಳಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಫೋಕ್ಸೊ) ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯನ್ನು (16 ವರ್ಷ) ಬಾಲಾಪರಾಧಿ ನ್ಯಾಯ ಮಂಡಳಿಗೆ ಕರೆದೊಯ್ಯುವ ಬದಲಾಗಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಅಪರಾಧಿಯ ಶಿಕ್ಷೆಯನ್ನು ರದ್ದು ಮಾಡಿ ಆದೇಶಿಸಿದೆ.

ಆರೋಪಿ ಬಾಲಾಪರಾಧಿ ಆಗಿರುವುದರಿಂದ ಸಾಮಾನ್ಯ ನ್ಯಾಯಾಲಯದ ಮುಂದೆ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಅವಕಾಶವಿಲ್ಲ. ಸಂತ್ರಸ್ತೆ ಸೇರಿದಂತೆ ಅನೇಕ ಸಾಕ್ಷಿಗಳು ಪ್ರತಿಕೂಲವಾಗಿರುವುದರಿಂದ ಅವರ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ. ಅಲ್ಲದೇ, ಕೇವಲ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಅವರನ್ನು ದೋಷಿ ಎಂದು ಪರಿಗಣಿಸಿದೆ. ಡಿಎನ್‍ಎ ಪರೀಕ್ಷೆಗಾಗಿ ಮಾದರಿಗಳ ಸಂಗ್ರಹವನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ವೈದ್ಯರ ಹೇಳಿಕೆಗಳನ್ನು ಸಹ ವಿಚಾರಣಾ ನ್ಯಾಯಾಲಯದ ಮುಂದೆ ದಾಖಲಿಸಲಾಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಜೊತೆಗೆ, ಬಾಲಾಪರಾಧಿಗಳಿಗೆ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ವಿಶೇಷ ಗೃಹಗಳಲ್ಲಿ ಗರಿಷ್ಠ ಬಂಧನದ ಅವಧಿ ಮೂರು ವರ್ಷಗಳಾಗಿದ್ದರೂ ಅವರು ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿರುವ ನ್ಯಾಯಪೀಠ, ಆರೋಪಿಯ ಶಿಕ್ಷೆಯನ್ನು ರದ್ದುಪಡಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News