HSRP ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ

Update: 2024-02-14 13:22 GMT

ಬೆಂಗಳೂರು : ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮುಂದಿನ 3 ತಿಂಗಳ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬುಧವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಸದಸ್ಯ ಮಧು ಜಿ.ಮಾದೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆಗೆ ಈ ಹಿಂದೆ ನಿಗದಿಪಡಿಸಿದ್ದ ಫೆ.17ರ ಗಡುವು ಮುಕ್ತಾಯದ ಅಂಚಿನಲ್ಲಿದ್ದು, ಈವರೆಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆಯ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ವಾಹನಗಳಿಗೆ ಮೂರು ತಿಂಗಳ ವರೆಗೆ ಅವಧಿ ವಿಸ್ತರಣೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಈಗಾಗಲೇ 18,32,787 ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಮಾಡಲಾಗಿದೆ. ರಾಜ್ಯದಲ್ಲಿ ಶೇ.9.16 ಮಾತ್ರ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಇದು ವೇಗವಾಗಿ ಆಗಿದೆ. ನಮ್ಮ ರಾಜ್ಯದಲ್ಲಿ ತಡವಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ವಾಹನಗಳಿಗೆ HSRP ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು ಓಇಎಂಗಳ ಅಧಿಕೃತ HSRP ತಯಾರಕರು ಅಧಿಕೃತಗೊಳಿಸಿದ ಪೋರ್ಟಲ್ ಮೂಲಕ ವಾಹನದ ಮಾಲಕರು ಆನ್‍ಲೈನ್‍ನಲ್ಲಿ ಮಾತ್ರ ಶುಲ್ಕ ಪಾವತಿಸಿ, ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರವಾದ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಇ-ವಾಹನ್ ಪೋರ್ಟಲ್‍ನಲ್ಲಿ ಇರುವ ವಾಹನದ ವಿವರಗಳು ಹಾಗೂ HSRP ತಯಾರಕರು ಅಧಿಕೃತಗೊಳಿಸಿದ ಆನ್‍ಲೈನ್ ಪೋರ್ಟಲ್‍ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ HSRP ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ. ಮಾನ್ಯತೆ ಇಲ್ಲದ ವಾಹನಗಳಿಗೆ HSRP ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ನಿಗದಿತ ದಿನಾಂಕದೊಳಗೆ HSRP ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ 500 ರೂ. ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ 1ಸಾವಿರ ರೂ.ನಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

HSRP ಅಳವಡಿಕೆಯ ಕಾರ್ಯವಿಧಾನ:

https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ BOOK HSRP ಅನ್ನು ಕ್ಲಿಕ್ ಮಾಡಿ.

► ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ, HSRP ಶುಲ್ಕವನ್ನು ಆನ್‍ಲೈನ್ ನಲ್ಲಿ ಪಾವತಿಸಿ.

► ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಪಾವತಿ ಮಾಡುವಂತಿಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.

► ನಿಮ್ಮ ವಾಹನದ ಯಾವುದೆ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ ವಾಹನ ಮಾಲಕರ ಕಚೇರಿ ಆವರಣ/ ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್, IND ಮಾರ್ಕ್, ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP/ ಒಂದೇ ರೀತಿಯ ಪ್ಲೇಟ್ ಗಳು/ ಸ್ಮಾರ್ಟ್ ನಂಬರ್ ಪ್ಲೇಟ್ ಗಳನ್ನು ಅಳವಡಿಸುವಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News