ಮಕ್ಕಳ ಪೋಷಣೆಯಲ್ಲಿ ತಂದೆಯ ಪಾತ್ರ ನಿರ್ಲಕ್ಷಿಸಲಾಗದು: ಹೈಕೋರ್ಟ್

Update: 2024-01-22 15:47 GMT

ಬೆಂಗಳೂರು: ಚಿಕ್ಕ ವಯಸ್ಸಿನ ಮಕ್ಕಳಿಗೆ ತಾಯಿಯು ಉತ್ತಮ ರೀತಿಯಲ್ಲಿ ಆರೈಕೆ ಮಾಡಬಲ್ಲಳು ಎಂಬುದರ ಕುರಿತು ಸಂಶಯವಿಲ್ಲ. ಆದರೆ, ಅಪ್ರಾಪ್ತ ಮಕ್ಕಳ ಬೆಳವಣಿಗೆಯಲ್ಲಿ ತಂದೆಯ ಪಾತ್ರ ನಿರ್ಲಕ್ಷಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಮ್ಮ ನಾಲ್ಕೂವರೆ ವರ್ಷದ ಮಗುವನ್ನು ಪ್ರತಿ ಶನಿವಾರ ಮತ್ತು ರವಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ತಂದೆಯ ಸುಪರ್ದಿಗೆ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ತಾಯಿಯೊಬ್ಬರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಮಕ್ಕಳಿಗೆ ಜೀವಂತ ತಂದೆ ಮತ್ತು ತಾಯಿಯ ಪ್ರೀತಿ, ಕಾಳಜಿಯನ್ನು ನಿರಾಕರಿಸಲಾಗದು ಎಂದು ತಿಳಿಸಿದೆ. ದಂಪತಿ ನಡುವಿನ ವಿವಾದದಲ್ಲಿ ಸಣ್ಣ ಮಕ್ಕಳು ತೊಂದರೆ ಅನುಭವಿಸುವಂತಾಗಬಾರದು. ಎಳೆ ಮಕ್ಕಳಿಗೆ ಇಬ್ಬರು ಪೋಷಕರ ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಸಹಯೋಗ ಅಗತ್ಯ. ಪೋಷಕರ ಗಲಾಟೆಯಲ್ಲಿ ಮಕ್ಕಳು ಬಲಿಪಶುವಾಗಬಾರದು. ಮಕ್ಕಳನ್ನು ಸಂಕಟ ಅನುಭವಿಸುವಂತೆ ಮಾಡಬಾರದು ಎಂದು ಪೀಠ ತಿಳಿಸಿದೆ.

ಅರ್ಜಿದಾರರಾದ ತಾಯಿಯ ವಾದ ತಳ್ಳಿ ಹಾಕಿದ ನ್ಯಾಯಪೀಠ, ಇಂತಹ ಹೇಳಿಕೆಗೆ ಯಾವುದೇ ಸಾಕ್ಷ್ಯ ಇರುವುದಿಲ್ಲ. ಊಹಾತ್ಮಕವಾದ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಪ್ರಕರಣದಲ್ಲಿ ತಾಯಿ ವೈದ್ಯೆಯಾಗಿದ್ದು, ತಂದೆ ಸಾಫ್ಟೇವೇರ್ ಎಂಜಿನಿಯರ್ ಆಗಿದ್ದಾರೆ. 2012ರ ಮೇ ತಿಂಗಳಲ್ಲಿ ಇವರ ವಿವಾಹವಾಗಿತ್ತು. ಇವರು ಸಲ್ಲಿಸಿರುವ ವಿಚ್ಛೇದನದ ಅರ್ಜಿ ಬೆಂಗಳೂರು ಗ್ರಾಮಾಂತರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ವಿಚಾರಣಾ ಹಂತದಲ್ಲಿತ್ತು. ಅರ್ಜಿ ವಿಚಾರಣೆಯ ಹಂತದಲ್ಲಿದ್ದು, ಮಗು ವಾರದಲ್ಲಿ ಎರಡು ದಿನ ತಂದೆಯೊಂದಿಗಿರಲು ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಮಗು ತನ್ನೊಂದಿಗೆ ಹೊಂದಿಕೊಂಡಿದೆ. ಮಗುವನ್ನು ವಾರದಲ್ಲಿ ಎರಡು ದಿನ ತಂದೆಯ ಕೈಗೆ ಒಪ್ಪಿಸುವುದು ಮಗುವನ್ನು ತಂದೆಯ ಸುಪರ್ದಿಗೆ ಶಾಶ್ವತವಾಗಿ ನೀಡಿದಂತೆ. ಹೀಗಾಗಿ, ವಾರದಲ್ಲಿ ಒಂದು ದಿನ ಅದೂ ತನ್ನ ಮೇಲ್ವಿಚಾರಣೆಯಲ್ಲಿ ಮಾತ್ರ ಮಗುವನ್ನು ತಂದೆಯ ಸುಪರ್ದಿಗೆ ನೀಡಬೇಕು ಎಂದು ಆದೇಶಿಸುವಂತೆ ತಾಯಿ ಅರ್ಜಿಯಲ್ಲಿ ಕೋರಿದ್ದರು. ಜತೆಗೆ, ಮಗುವನ್ನು ತಂದೆ ಅಪಹರಣ ಮಾಡಬಹುದು ಅಥವಾ ಮಗುವಿನ ಜೊತೆ ಪರಾರಿ ಆಗಬಹುದು ಎಂದು ತಾಯಿ ಆತಂಕ ವ್ಯಕ್ತಪಡಿಸಿದ್ದಳು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News