ವಾಲ್ಮೀಕಿ ನಿಗಮದಲ್ಲಿ ಹಗರಣ | ಕೇಂದ್ರ ತನಿಖಾ ಸಂಸ್ಥೆ ರಾಜಕೀಯ ಅಸ್ತ್ರ ಆಗಬಾರದು : ಜಿ.ಪರಮೇಶ್ವರ್

Update: 2024-07-13 12:24 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಡಿ, ಸಿಬಿಐ ಸೇರಿ ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಬಾರದು ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ತನಿಖೆಗೆ ನಮ್ಮ ತಕರಾರು ಇಲ್ಲ. ಅಲ್ಲದೆ, ಈಗಾಗಲೇ ನಮ್ಮ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಚುರುಕುಗೊಂಡಿದೆ ಎಂದರು.

ಇನ್ನೂ, ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ದದ್ಧಲ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ವಿಚಾರಕ್ಕೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಏಕಾಏಕಿ ಈಡಿ ಪ್ರವೇಶ ಮಾಡಿದೆ, ಅವರಿಗೆ ಮಾಹಿತಿ ಇರಬಹುದು ಅದನ್ನು ನಾವು ಅಲ್ಲಗಳೆಯುವುದಿಲ್ಲ ಎಂದು ಅವರು ಹೇಳಿದರು.

ಇತ್ತ ಜಾರಿ ನಿರ್ದೇಶನಾಲಯ ತನಿಖೆ ನಡೆಯುತ್ತಿರುವ ನಡುವೆಯೇ ಎಸ್‌ಐಟಿ ಕೂಡ ಇಬ್ಬರನ್ನು ಕರೆಸಿ ವಿಚಾರಣೆ ಮಾಡಿ, ಅಗತ್ಯ ಮಾಹಿತಿ ಪಡೆದಿದೆ. ಅಗತ್ಯ ಎನಿಸಿದರೆ ಮತ್ತೆ ವಿಚಾರಣೆಗೆ ಕರೆಯುತ್ತಾರೆ. ನಿಗಮದ ಅಧ್ಯಕ್ಷ ಬಸವನಗೌಡ ದದ್ಧಲ್ ತಲೆ ಮರೆಸಿಕೊಂಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಈಡಿ ತನಿಖೆ ನಡೆಸಲಾಗುತ್ತಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಈಡಿಯವರು ನಮ್ಮ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ, ಊಹೆ ಮಾಡಿ ಹೇಳುವುದು ನಮಗೂ ಸರಿ ಕಾಣುವುದಿಲ್ಲ ಎಂದೂ ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News