ಮುಡಾ ಪ್ರಕರಣ | ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ, ಸಿಎಂ ಜೊತೆ ಹೈಕಮಾಂಡ್ ನಿಲ್ಲಲಿದೆ : ಗೃಹ ಸಚಿವ ಜಿ.ಪರಮೇಶ್ವರ್‌

Update: 2024-08-28 08:28 GMT

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ಣಯವನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ‌. ಸಿಎಂ ಅವರ ಸಹಿ, ಯಾವುದೇ ರೀತಿಯ ದಾಖಲೆಗಳಿಲ್ಲ. ರಿಜಿಸ್ಟ್ರೇಷನ್ ನಲ್ಲಿಯೂ ಸಹ ಅವರ ಹೆಸರು ಉಲ್ಲೇಖವಾಗಿಲ್ಲ. ಇದೆಲ್ಲವನ್ನು ನ್ಯಾಯಾಲಯ ಗಮನಿಸಿಯೇ ತೀರ್ಮಾನ ಕೊಡುತ್ತದೆ ಎಂದು ನಿರೀಕ್ಷೆ ಮಾಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ, ಮುಖ್ಯಮಂತ್ರಿಯವರ ಜೊತೆ ಹೈಕಮಾಂಡ್ ನಿಲ್ಲಲಿದೆ. ನಾವೆಲ್ಲರೂ ಸಹ ಸಿಎಂ ಜೊತೆ ಇರುತ್ತೇವೆ. ಕೋರ್ಟ್ ತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಚರ್ಚೆ ಆಗಲಿದೆ" ಎಂದರು.

ಪ್ರಭಾವ ಬಳಸಿಲ್ಲ :

ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ನೀಡಿದ ವಿಚಾರದ ಪ್ರತಿಕ್ರಿಯಿಸಿ, ಕೆಐಎಡಿಬಿ ನಿವೇಶನ ಅಕ್ರಮವಾಗಿ ಪಡೆದಿದ್ದಾರೆ ಇಲ್ಲವೇ ಎಂಬುದನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿ. ಅವರು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಎಂಬುದಾದರೆ ರಾಜ್ಯಪಾಲರು ಏನು ಕ್ರಮ ತೆಗೆದುಕೊಳ್ಳಬೇಕು, ತೆಗೆದುಕೊಳ್ಳಲಿ.‌ ಖರ್ಗೆ ಅವರು ತಮ್ಮ ಪ್ರಭಾವ ಬಳಸಿ, ಟ್ರಸ್ಟ್‌ಗೆ ನಿವೇಶನ ಪಡೆದಿಲ್ಲ ಎಂದರು‌.

ರಾಜ್ಯದಾದ್ಯಂತ ಪ್ರತಿಭಟನೆ : ರಾಜ್ಯಪಾಲರ ನಡೆಯ ಬಗ್ಗೆ ಒಂದಷ್ಟು ಚರ್ಚೆ ಮಾಡಿ ತೀರ್ಮಾನಗಳನ್ನು ಮಾಡಿದ್ದೇವೆ. ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ. ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡುತ್ತೇವೆ ಎಂದರು.

ಇದರ ಜೊತೆಯಲ್ಲೇ ಎಲ್ಲ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದೇವೆ. ಅಷ್ಟರೊಳಗೆ ಕೋರ್ಟ್‌ನಲ್ಲಿ ಏನೆಲ್ಲ ತೀರ್ಮಾನ ಆಗುತ್ತದೆ ಎಂಬುದನ್ನು ನೋಡಬೇಕಿದೆ. ಆನಂತರ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆ.31ರಂದು ರಾಜಭವನ ಚಲೋ ಮಾಡುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News