ನಾಳೆ(ಮಾ.25) ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆ
ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತ್ತುಗೊಂಡಿದ್ದ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ (ಕೆಕೆಪಿಪಿ)ದ ರಾಜ್ಯಾಧ್ಯಕ್ಷ ಹಾಗೂ ಗಂಗಾವತಿ ಕ್ಷೇತ್ರದ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಾಳೆ(ಮಾ.25)ಬಿಜೆಪಿಗೆ ಮರಳಲಿದ್ದಾರೆ.
ರವಿವಾರ ಇಲ್ಲಿನ ಚಾಲುಕ್ಯ ವೃತ್ತದಲ್ಲಿನ ತನ್ನ ನಿವಾಸ ಪಾರಿಜಾತದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ‘ಇಂದಿನ ಸಭೆಯಲ್ಲಿ ಬಿಜೆಪಿ ಸೇರ್ಪಡೆ ಸಂಬಂಧ ತೀರ್ಮಾನ ಮಾಡಲಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ ತಮ್ಮ ಎಲ್ಲ ಬೆಂಬಲಿಗರೊಂದಿಗೆ ನಾನು, ನಾಳೆ(ಮಾ.25)ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ’ ಎಂದು ತಿಳಿಸಿದರು.
‘ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ಆ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ನಾಳೆ ಬೆಳಗ್ಗೆ 10ಕ್ಕೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಬೆಂಬಲಿಗರ ಅಭಿಪ್ರಾಯ ಪಡೆದಿದ್ದೇನೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ 10 ವರ್ಷದಿಂದ ದೇಶ ಅಭಿವೃದ್ಧಿಯಾಗಿದೆ. ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಈ ನಿರ್ಧಾರ ಮಾಡಿದ್ದೇನೆ’ ಎಂದು ಅವರು ಹೇಳಿದರು.
ಕೆಕೆಪಿಪಿ ಸ್ಥಾಪನೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ತಂದೆ ರೀತಿ ನೋಡುತ್ತೇನೆ ಎಂದಿದ್ದೆ. ಮಾಜಿ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಮೋದಿರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ. ಅತೀಚಿಕ್ಕ ವಯಸ್ಸಿನಿಂದಲೂ ಬಿಜೆಪಿಗಾಗಿ ಕೆಲಸ ಮಾಡಿದ್ದೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ವಾರದ ಹಿಂದೆಯಷ್ಟೇ ರೆಡ್ಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಪಕ್ಷ ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ್ದ ರೆಡ್ಡಿ, ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಬರುತ್ತೇನೆ. ರಾಜ್ಯ ಘಟಕಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಮತ್ತಿತರರ ಜೊತೆ ಮಾತನಾಡಿ, ರೆಡ್ಡಿ ಸೇರ್ಪಡೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ನಿರ್ದೇಶನ ನೀಡಿದ್ದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ 2011ರ ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರ ಬಂದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಆದರೆ, ರೆಡ್ಡಿಗೆ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ಇನ್ನೂ ನಿಬರ್ಂಧವಿದೆ.
ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಗಂಗಾವತಿ ಕ್ಷೇತ್ರದ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಾಳೆ(25) ಬೆಳಗ್ಗೆ 9ಗಂಟೆಗೆ ಮಲ್ಲೇಶ್ವರದಲ್ಲಿರುವ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.