10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 2.32 ಲಕ್ಷ ಮನೆ ಪೂರ್ಣಗೊಳಿಸಲು ಅನುದಾನ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು, ನ.3: ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 2.32 ಲಕ್ಷ ಮನೆಗಳನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ್ದ ಯೋಜನೆ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ನೆನೆಗುದಿಗೆ ಬಿದ್ದಿದ್ದು ಇದೀಗ ಸರಕಾರವೆ ಸಂಪೂರ್ಣ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿ ಜತೆಗೆ ಆರನೆ ಗ್ಯಾರಂಟಿ ಆಗಿ ಅಪೂರ್ಣ ಆಗಿರುವ 2.32 ಲಕ್ಷ ಮನೆಗಳನ್ನು ಮುಂದಿನ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ವೇದಿಕೆಯಲ್ಲೆ 2.42 ಲಕ್ಷ ಮನೆ ಉಚಿತವಾಗಿ ನೀಡಲು ತಗಲುವ ಎಂಟು ಸಾವಿರ ಕೋಟಿ ರೂ.ಗಳನ್ನು ಹಂತ ಹಂತವಾಗಿ ಒದಗಿಸುವ ಭರವಸೆ ನೀಡಿದ್ದು, ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ ಎಂದು ಅವರು ಹೇಳಿದರು.
ಈ ತೀರ್ಮಾನದಿಂದಾಗಿ 2.42 ಲಕ್ಷ ಕುಟುಂಬಗಳಿಗೆ ನೆಮ್ಮದಿ ದೊರಕಲಿದೆ. ಬ್ಯಾಂಕ್ ಸಾಲ ಸಿಗದೆ ಆತಂಕ ದಲ್ಲಿದ್ದವರು ನಿರಾಳ ಆಗಲಿದ್ದು, ಫಲಾನುಭವಿಗಳ ವಂತಿಗೆ ಇಲ್ಲದೆ ಮನೆ ಸಿಗಲಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿ ಕೊಡುವ ಮನೆಗೆ ಘಟಕ ವೆಚ್ಚ 7 ಲಕ್ಷ ರೂ. ಆಗಲಿದ್ದು ಕೇಂದ್ರ ಮತ್ತು ರಾಜ್ಯ ಸರಕಾರದ ಸಬ್ಸಿಡಿ 3 ಲಕ್ಷ ರೂ. ವರೆಗೆ ಸಿಗಲಿದ್ದು, ಉಳಿದ ನಾಲ್ಕು ಲಕ್ಷ ರೂ. ಫಲಾನುಭವಿ ಗಳು ಕಟ್ಟಬೇಕಿತ್ತು. ಇದೀಗ ಫಲಾನುಭವಿ ಪಾಲಿನ ವಂತಿಗೆ ಸರಕಾರವೆ ಭರಿಸಿದಂತಾಗಲಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.