ಗುಜರಾತ್‌ ನಲ್ಲಿ ಅಮೆರಿಕಾ ಕಂಪನಿಯು ಪ್ರತಿ ಉದ್ಯೋಗ ಸೃಷ್ಟಿಗೆ ರೂ. 3.2 ಕೋಟಿ ಸಬ್ಸಿಡಿ ಪಡೆಯುವುದನ್ನು ಪ್ರಶ್ನಿಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ

Update: 2024-06-15 07:54 GMT

ಎಚ್‌ ಡಿ ಕುಮಾರಸ್ವಾಮಿ | PTI 

ಬೆಂಗಳೂರು: ಅಮೆರಿಕಾ ಮೂಲದ ಸೆಮಿಕಂಡಕ್ಟರ್‌ ತಯಾರಿಕಾ ಸಂಸ್ಥೆ ಮೈಕ್ರಾನ್‌ ಟೆಕ್ನಾಲಜಿ ಗುಜರಾತ್‌ನಲ್ಲಿ 2.5 ಬಿಲಿಯನ್‌ ಡಾಲರ್‌ ಮೊತ್ತದಲ್ಲಿ ತನ್ನ ಘಟಕ ಸ್ಥಾಪಿಸುವುದು ಹಾಗೂ ಅದು ಒದಗಿಸುವ ಪ್ರತಿ ಒಂದು ಉದ್ಯೋಗಕ್ಕೆ ರೂ. 3.2 ಕೋಟಿ ತನಕ ಸಬ್ಸಿಡಿ ಪಡೆಯುವ ಸಂಭಾವ್ಯತೆಯನ್ನು ಕೇಂದ್ರ ಬೃಹತ್‌ ಕೈಗಾರಿಕೆಗಳ ಮತ್ತು ಉಕ್ಕು ಸಚಿವ ಎಚ್‌ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ನೇರ ಭಾಷಣದಲ್ಲಿ ಅವರು ಕಂಪನಿಯ ಹೆಸರನ್ನು ಉಲ್ಲೇಖಿಸಿ ನಂತರ ತಮಗೆ ಹಾಗೆ ಹೇಳುವ ಅಧಿಕಾರವಿಲ್ಲ ಎಂಬ ಸಮಜಾಯಿಷಿ ನೀಡಿದರು ಎಂದು times of india ವರದಿ ಮಾಡಿದೆ.

“ಹೊಸ ಉತ್ಪಾದನಾ ಘಟಕವು ಸುಮಾರು 5,000 ಉದ್ಯೋಗ ಸೃಷ್ಟಿ ಮಾಡಲಿದೆ. ಇದಕ್ಕಾಗಿ ನಾವು 2 ಬಿಲಿಯನ್‌ ಡಾಲರ್‌ ಸಬ್ಸಿಡಿ ನೀಡುತ್ತಿದ್ದೇವೆ… ಲೆಕ್ಕ ಮಾಡಿದರೆ ಒಟ್ಟು ಹೂಡಿಕೆಯ ಶೇ 70ರಷ್ಟು ಇದಾಗುತ್ತದೆ,” ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಹೇಳಿದರು.

“ಇಷ್ಟೊಂದು ಮೊತ್ತ ನೀಡುವುದು ಎಷ್ಟು ಸಮರ್ಥನೀಯ ಎಂದು ಅಧಿಕಾರಿಗಳನ್ನು ಕೇಳಿದೆ. ಹಲವಾರು ಸಣ್ಣ ಕೈಗಾರಿಕೆಗಳಿವೆ. ಪೀಣ್ಯದಲ್ಲಿ ಹಲವಾರು ಸಣ್ಣ ಕೈಗಾರಿಕೆಗಳಿವೆ. ಅವುಗಳು ಎಷ್ಟು ಲಕ್ಷ ಉದ್ಯೋಗ ಸೃಷ್ಟಿಸಿವೆ? ನಾವು ಅವರಿಗೆ ಯಾವ ಪ್ರಯೋಜನಗಳನ್ನು ನೀಡಿದ್ದೇವೆ? ನಾನು ಈ ವಿಚಾರಗಳನ್ನು ಮತ್ತು ನಮ್ಮ ದೇಶದ ಸಂಪತ್ತನ್ನು ಹೇಗೆ ರಕ್ಷಿಸುವುದು ಎಂದು ಪರಿಶೀಲಿಸುತ್ತಿದ್ದೇನೆ,” ಎಂದು ಕುಮಾರಸ್ವಾಮಿ ಹೇಳಿದರು.

“ದೇಶದ ಯುವಜನತೆಗೆ ಉದ್ಯೋಗಾವಕಾಶ ನೀಡುವ ಬಗ್ಗೆ ನಾನು ಗಮನ ಹರಿಸುತ್ತೇನೆ. ರಾಜ್ಯದ ಹೊರಗೆ ಕೂಡ ಉದ್ಯೋಗಾವಕಾಶ ದೊರೆಯುವಂತೆ ಸಹಕರಿಸಬಲ್ಲೆ,” ಎಂದು ಕುಮಾರಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News