ಹಾಸನ: ಗೆಳಯರ ನಡುವಿನ 50 ರೂ. ವಿಚಾರದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ಹಾಸನ, ಫೆ.15: ಐವತ್ತು ರೂ. ವಿಚಾರವಾಗಿ ಗೆಳಯರಿಬ್ಬರ ನಡುವೆ ಆರಂಭಗೊಂಡ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅರುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಸಂಜೀವಪ್ಪನವರ್(42) ಕೊಲೆಯಾದ ವ್ಯಕ್ತಿ. ಅವರ ಗೆಳೆಯ ರುದ್ರಯ್ಯ ಕೊಂಗವಾಡ ಕೊಲೆಗೈದ ಆರೋಪಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ನಿವಾಸಿಗಳಾಗಿದ್ದ ಇವರಿಬ್ಬರು ಎರಡು ವಾರಗಳ ಹಿಂದೆ ಅರುವನಹಳ್ಳಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದರು.
ಬುಧವಾರ ಕುಡಿದ ಮತ್ತಿನಲ್ಲಿ 50 ರೂ. ವಿಚಾರದಲ್ಲಿ ರಾಮಚಂದ್ರ ಮತ್ತು ರುದ್ರಯ್ಯ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ರಾಮಚಂದ್ರರ ಮೇಲೆ ರುದ್ರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಇದರಿಂ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.