ಬೆಲೆ ಏರಿಕೆ ವಿರುದ್ಧ ಬಿಜೆಪಿಗರ ಹೋರಾಟ ಹಾಸ್ಯಾಸ್ಪದ : ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ಕೇಂದ್ರ ಸರಕಾರವು ಅಡುಗೆ ಸಿಲಿಂಡರ್ ದರವನ್ನು 50 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದೇ ಸಂದರ್ಭದಲ್ಲಿ ವಿಪಕ್ಷವಾದ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹಾಸ್ಯಾಸ್ಪದ ರೀತಿಯಲ್ಲಿ ಬೆಲೆ ಏರಿಕೆ ಹೋರಾಟ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಗರ ಅವಧಿಯಲ್ಲಿ ಬೆಲೆ ಏರಿಕೆಯ ಪ್ರವಾಹವೇ ಹರಿಯಿತು. ಬಹು ಮುಖ್ಯವಾಗಿ ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಸಹ ಪೆಟ್ರೋಲ್, ಡೀಸೆಲ್ ಬೆಲೆಯನ್ನು ವಿಪರೀತ ಏರಿಸಿ ಜನರನ್ನು ಲೂಟಿದ್ದ ಮಾಡಿದ ಬಿಜೆಪಿಗರು ತಮ್ಮ ಲೂಟಿಯ ಪ್ರವೃತ್ತಿಯನ್ನು ಇಂದಿಗೂ ನಿಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಕೊರೋನ ಸಂದರ್ಭದಲ್ಲಂತೂ ಇವರು ಮಾಡಿದ ಲೂಟಿಗೆ ಜನರೇ ಬೇಸತ್ತು ಹಿಡಿ ಶಾಪ ಹಾಕಿದ್ದರು. ಬಿಜೆಪಿಗರ ಅವಧಿಯಲ್ಲಿ ಆಹಾರ ಧಾನ್ಯಗಳಿಂದ ಮೊದಲಾಗಿ ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಇವರ ಬೆಲೆ ಏರಿಕೆಯಿಂದಾಗಿ ಎಲ್ಲರೂ ತತ್ತರಿಸಿದ್ದಾರೆಯೇ ವಿನಃ, ಇವರಿಂದ ಯಾವ ಜನ ಸಮುದಾಯಕ್ಕೂ ಅನುಕೂಲ ಆಗಿಲ್ಲ ಎಂದು ಮಹದೇವಪ್ಪ ದೂರಿದ್ದಾರೆ.
ಅವೈಜ್ಞಾನಿಕ ಜಿ.ಎಸ್.ಟಿ ಸುಲಿಗೆ, ಅಸಮರ್ಪಕ ತೆರಿಗೆ ನೀತಿಯ ಮೂಲಕ ಸಣ್ಣ ಪುಟ್ಟ ಉದ್ಯಮಿಗಳ ಸುಲಿಗೆ ಮಾಡುತ್ತಿರುವ ಬಿಜೆಪಿಗರಿಗೆ ತೆರಿಗೆ ಸಂಗ್ರಹಣೆ ಮಾಡುವುದು ಜನರಿಗಾಗಿ ಎಂಬ ಸಂಗತಿಯೇ ಮರೆತು ಹೋಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷಾಂತರ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಿರುವ ಇವರು ಯಾವುದೇ ಜನಪರ ಕಾರ್ಯಕ್ರಮ ನೀಡದೇ ಆ ಹಣವನ್ನೆಲ್ಲಾ ಯಾರ ಜೇಬಿಗೆ ಹಾಕಿದ್ದಾರೆ ಎಂಬುದರ ಬಗ್ಗೆ ಈವರೆಗೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮಲ್ಲಿ ಹಾಲಿನ ದರ ಏರಿಕೆಯಾದರೂ ಕೂಡಾ ಅದರ ಫಲಾನುಭವಿಗಳು ರೈತರೇ ಆಗಿದ್ದಾರೆ. ಇನ್ನು ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಗರ ಲೂಟಿ ಮತ್ತು ದುರಾಡಳಿತದಿಂದ ನಲುಗಿ ಹೋಗಿದ್ದ ಜನರಿಗೆ ಆರ್ಥಿಕ ಆಸರೆಯಾಗಿದೆ ಎಂದು ಮಹದೇವಪ್ಪ ಪ್ರತಿಪಾದಿಸಿದ್ದಾರೆ.
ಹೀಗಾಗಿ, ಜನರ ಪರವಾಗಿ ಕೆಲಸ ಮಾಡುವ ಮತ್ತು ಅವರ ಏಳಿಗೆಗಾಗಿ ಚಿಂತಿಸುವ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವ ಬದಲು ಬಿಜೆಪಿಗರು ಹೆಚ್ಚಾಗಿರುವ ಸಿಲಿಂಡರ್ ಬೆಲೆ, ಆಹಾರ ಧಾನ್ಯಗಳ ಬೆಲೆ ಮತ್ತು ತೈಲ ಬೆಲೆಯನ್ನು ತಗ್ಗಿಸಿ ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಲಿ. ಇದರ ಜೊತೆಗೆ ರಾಜ್ಯದ ತೆರಿಗೆ ಪಾಲನ್ನು ಕೇಳುವ ಮನಸ್ಸು ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.