ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ
ಬೆಂಗಳೂರು, ಎ.11: ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.
ಈ ಬಗ್ಗೆ 'X'ನಲ್ಲಿ ಪೋಸ್ಟ್ ಮಾಡಿರುವ ಆರೋಗ್ಯ ಸಚಿವರು, ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಈ ಬಗ್ಗೆ ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ರಾಮದೇವ್ ಮತ್ತು ಅವರ ಪತಂಜಲಿ ಸಂಸ್ಥೆ ಮಾಡಿರುವ ಘೋರ ವಂಚನೆ ಅಕ್ಷಮ್ಯ. ಆಯುರ್ವೇದ ಮತ್ತು ಭಾರತೀಯ ವೈದ್ಯ ಪದ್ಧತಿಗೆ ಅಪಖ್ಯಾತಿ ತಂದಿದ್ದಾರೆ. ಆರೋಗ್ಯ, ವ್ಯಾಪಾರ ಅಥವಾ ರಾಜಕೀಯದಲ್ಲಿ ನಿಮಗೆ ಕುರುಡು ನಂಬಿಕೆ ಇದ್ದಾಗ ಹೀಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರಾಖಂಡದ ಔಷದ ಪರವಾನಿಗೆ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೈದ ಬೆನ್ನಲ್ಲೇ, ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶ ಹೊರಡಿಸಿದ್ದಾರೆ.