ಅರೆ ನ್ಯಾಯಿಕ ಪ್ರಾಧಿಕಾರಗಳ ಪ್ರಕ್ರಿಯೆಗಳನ್ನು ವೆಬ್‍ಹೋಸ್ಟ್ ಮಾಡಲು ಹೈಕೋರ್ಟ್ ನಿರ್ದೇಶನ

Update: 2023-08-16 14:42 GMT

ಬೆಂಗಳೂರು, ಆ.16: ಇ-ಕೋರ್ಟ್ ಯೋಜನೆಯ ರೀತಿಯಲ್ಲಿಯೇ ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದಿರುವ ಪ್ರಕರಣಗಳ ಎಲ್ಲ ಆದೇಶ, ಪ್ರಕ್ರಿಯೆಗಳನ್ನು ವೆಬ್‍ಹೋಸ್ಟ್ ಮಾಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹೈಕೋರ್ಟ್‍ನ ಕಲಬುರಗಿ ಪೀಠವು ಆದೇಶ ನೀಡಿದೆ.

ರಾಯಚೂರು ಜಿಲ್ಲೆಯ ಉಪವಿಭಾಗಾಧಿಕಾರಿಯು ಭೂ ವಿವಾದ ಕುರಿತಾದ ಆರ್‍ಆರ್‍ಟಿ ಮೇಲ್ಮನವಿಗೆ ಸಂಬಂಧಿಸಿದಂತೆ ಮಾಡಿದ್ದ ಆಕ್ಷೇಪಾರ್ಹ ಆದೇಶವನ್ನು ವಜಾ ಮಾಡುವಂತೆ ಕೋರಿ ತೆಲಂಗಾಣ ರಾಜ್ಯದ ಮೆಹಬೂಬ್ ನಗರದ ನಿವಾಸಿಗಳಾದ ಭುರಾನ್ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸಹಾಯಕ ಆಯುಕ್ತರು 2022ರ ನ.4ರಂದು ವಿಚಾರಣೆ ನಡೆಸಿ, ನ.18ಕ್ಕೆ ಪ್ರಕರಣ ಮುಂದೂಡಿದ್ದರು. ಈ ಮಧ್ಯೆ, ನವೆಂಬರ್ 9ರಂದು ಆಕ್ಷೇಪಾರ್ಹವಾದ ಆದೇಶ ಮಾಡಿರುವುದು ಆಘಾತಕಾರಿ ವಿಚಾರ. ನವೆಂಬರ್ 9ರಂದು ವಿಚಾರಣೆಗೆ ನಿಗದಿಪಡಿಸಿದಾಗ ಅದನ್ನು ಕೈಗೆತ್ತಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ. ನವೆಂಬರ್ 18ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂಬ ಅಂಶ ಮಾತ್ರ ಆದೇಶದಲ್ಲಿ ಇದೆ.

ಈ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾಧಿಕಾರಿಯು ವಿಚಾರಣೆ ನಡೆಸಿ, ನವೆಂಬರ್ 9ರಂದು ಹೇಗೆ ಆದೇಶ ಮಾಡಲಾಗಿದೆ ಎಂದು ಪತ್ತೆ ಹಚ್ಚಬೇಕು. ಈ ಸಂಬಂಧದ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇ-ಕೋರ್ಟ್‍ಗಳ ಯೋಜನೆಯ ರೀತಿಯಲ್ಲಿ ಅರೆನ್ಯಾಯಿಕ ಪ್ರಾಧಿಕಾರಗಳ ಮುಂದೆ ನಡೆಯುವ ಪ್ರಕರಣಗಳ ಆದೇಶದ ಪ್ರತಿ, ಪ್ರಕ್ರಿಯೆಗಳನ್ನು ವೆಬ್ ಹೋಸ್ಟ್ ಮಾಡುವಂತೆ ಬೇರೊಂದು ಪ್ರಕರಣದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಲಾಗಿದೆ. ಅದನ್ನು ಮಾಡಿದ್ದರೆ ಹಾಲಿ ಪ್ರಕರಣದಂಥ ವಿಚಾರಗಳು ನಡೆಯುತ್ತಿರಲಿಲ್ಲ. ಇದರಿಂದ ಪಕ್ಷಕಾರರಿಗೆ ಯಾವತ್ತು ಮುಂದಿನ ವಿಚಾರಣೆ ನಡೆಯಲಿದೆ. ಆದೇಶದಲ್ಲಿ ಏನು ಹೇಳಲಾಗಿದೆ ಎಂಬುದು ತಿಳಿಯುತ್ತಿತ್ತು.

ಈ ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಪ್ರಕರಣದ ಕುರಿತು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಜೊತೆ ಚರ್ಚಿಸಿ, ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದಿನ ಆದೇಶ ಮತ್ತು ಪ್ರಕ್ರಿಯೆಗಳನ್ನು ಇ-ಕೋರ್ಟ್‍ಗಳ ಮಾದರಿಯಲಿ ವೆಬ್ ಹೋಸ್ಟ್ ಮಾಡುವ ವ್ಯವಸ್ಥೆ ರೂಪಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಇದರೊಂದಿಗೆ ರಾಯಚೂರಿನ ಉಪವಿಭಾಗಾಧಿಕಾರಿ ನ.9ರಂದು ಮಾಡಿದ್ದ ಆಕ್ಷೇಪಾರ್ಹ ಆದೇಶವನ್ನು ಹೈಕೋರ್ಟ್ ವಜಾ ಮಾಡಿದ್ದು, ಎಲ್ಲ ಪಕ್ಷಕಾರರನ್ನು ಆಲಿಸಿದ ಬಳಿಕ ಹೊಸದಾಗಿ ಆದೇಶ ಮಾಡಲು ಪ್ರಕರಣವನ್ನು ಮತ್ತೆ ಸಹಾಯಕ ಆಯುಕ್ತರಿಗೆ ಮರಳಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News