ಕಾವಲುಗಾರನಂತೆ ನಟಿಸಿ ಮಗಳ ಭೇಟಿಗೆ ಯತ್ನ: ಪತಿಯ ವಿರುದ್ಧ ಮಾಜಿ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2023-12-27 13:09 GMT

ಬೆಂಗಳೂರು: ಕಸದ ವಾಹನದ ಕಾವಲುಗಾರನಂತೆ ನಟಿಸಿ ತಮ್ಮ 8 ವರ್ಷದ ಮಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಮಹಿಳೆಯೊಬ್ಬಳು ತನ್ನ ಮಾಜಿ ಪತಿಯ ವಿರುದ್ಧ ಮನೆ ಅತಿಕ್ರಮಣ ಪ್ರವೇಶ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

ಪತಿಗೆ ತನ್ನ ಮಗಳನ್ನು ಭೇಟಿ ಮಾಡಲು ಕಾನೂನಿನಲ್ಲಿ ಹಕ್ಕಿದೆ ಮತ್ತು ಅವರ ಮಾಜಿ ಪತ್ನಿ ಕ್ಷುಲ್ಲಕ ಕಾರಣಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೈಕೋರ್ಟ್ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಮಗಳನ್ನು ಭೇಟಿ ಮಾಡಲು ಬಯಸಿದ ದಿನವೇ ಪತಿಗೆ ಭೇಟಿಯ ಮಾನ್ಯತೆ ಇತ್ತು. ಹೀಗಾಗಿ, ಸಕ್ಷಮ ನ್ಯಾಯಾಲಯದ ಆದೇಶದ ಪ್ರಕಾರ, ಮಗಳನ್ನು ಭೇಟಿ ಮಾಡಲು ಅವರಿಗೆ ಕಾನೂನಿನಲ್ಲಿ ಹಕ್ಕಿದೆ ಎಂದು ನ್ಯಾಯಪೀಠವು ಹೇಳಿದೆ.

ದಂಪತಿಯು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದ ನಂತರ ಬೇರ್ಪಟ್ಟಿದ್ದರು, ನಂತರ ತಾಯಿಗೆ ತಮ್ಮ ಮಗಳ ಸುಪರ್ದಿ ನೀಡಲಾಯಿತು ಮತ್ತು ತಂದೆಗೆ ಪ್ರತಿ ಶನಿವಾರ ಮಗುವನ್ನು ಭೇಟಿ ಮಾಡುವ ಹಕ್ಕನ್ನು ನೀಡಲಾಗಿತ್ತು. ಆದಾಗ್ಯೂ, ಕಳೆದ ವರ್ಷ ಒಂದು ನಿರ್ದಿಷ್ಟ ಶನಿವಾರದಂದು, ತಾಯಿ ಇಮೇಲ್ ಮೂಲಕ ತಂದೆಯ ಭೇಟಿಯನ್ನು ಮರು ನಿಗದಿಪಡಿಸಿದ್ದರು, ಇದನ್ನು ತಂದೆ ಒಪ್ಪಿಕೊಂಡಿದ್ದರು.

ಆದಾಗ್ಯೂ, ಆ ವ್ಯಕ್ತಿ ತಮ್ಮ ಮಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆಕ್ಷೇಪಿಸಿದ್ದಾರೆ. ಮೈಗೇಟ್ ಅಪ್ಲಿಕೇಶನ್ ಮೂಲಕ ವಿನಂತಿಯನ್ನು ಕಳುಹಿಸುವ ಮೂಲಕ ತಂದೆ ಮೊದಲು ಅಪಾರ್ಟ್‍ಮೆಂಟ್ ಸಂಕೀರ್ಣ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅನುಮತಿ ನಿರಾಕರಿಸಿದ ನಂತರ, ತಂದೆ ಕಸದ ವ್ಯಾನ್ ಹತ್ತಿ ಅಪಾರ್ಟ್‍ಮೆಂಟ್ ಸಂಕೀರ್ಣಕ್ಕೆ ಪ್ರವೇಶಿಸಲು ಕಾವಲುಗಾರನಂತೆ ನಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಮಹಿಳೆ ತನ್ನ ವಿಚ್ಛೇದಿತ ಮಾಜಿ ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನಂತರ, ಅವರು (ಅರ್ಜಿದಾರರು) ಪರಿಹಾರಕ್ಕಾಗಿ ಹೈಕೋರ್ಟ್‍ಗೆ ಮನವಿ ಸಲ್ಲಿಸಿದರು.

ದಂಪತಿ ವಿಚ್ಛೇದನ ಆದೇಶದ ಪ್ರಕಾರ, ಪತಿಯು ಪ್ರತಿ ಶನಿವಾರ ಮಧ್ಯಾಹ್ನ 3 ರಿಂದ 5 ರವರೆಗೆ ತನ್ನ ಮಗಳನ್ನು ಪತ್ನಿಯ ನಿವಾಸದಲ್ಲಿ ಅಥವಾ ತಟಸ್ಥ ಸ್ಥಳದಲ್ಲಿ ಭೇಟಿ ಮಾಡುವ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.

ಅರ್ಜಿದಾರರು ತಮ್ಮ ಮಗಳನ್ನು ಹೇಗೆ ಬೆದರಿಸಿದ್ದಾರೆಂದು ಅರ್ಥವಾಗುತ್ತಿಲ್ಲ ಮತ್ತು ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ಇದು ಕ್ರಿಮಿನಲ್ ಬೆದರಿಕೆ ಹೇಗಾಗುತ್ತದೆ ಎಂದು ತಿಳಿಯುವುದಿಲ್ಲ. ಯಾವುದೇ ಹೆಚ್ಚಿನ ತನಿಖೆಯನ್ನು ಮುಂದುವರಿಸಲು ಅನುಮತಿಸಿದರೆ, ಅದು ಮೇಲ್ನೋಟಕ್ಕೆ, ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News