‘ಬೆಂಗಳೂರು ಅರಮನೆ ಜಾಗ ಬಳಕೆʼ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಕ್ರಮ : ಎಚ್.ಕೆ.ಪಾಟೀಲ್

Update: 2025-01-30 19:54 IST
Photo of HK Patil

ಎಚ್.ಕೆ.ಪಾಟೀಲ್

  • whatsapp icon

ಬೆಂಗಳೂರು : ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಜ.29ರಂದು ಹೊರಡಿಸಿರುವ ಅಧ್ಯಾದೇಶವನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ 2024ರ ಡಿ.10ರಂದು ನೀಡಿರುವ ತೀರ್ಪಿನಲ್ಲಿ ಆ ಜಮೀನಿಗೆ ಟಿಡಿಆರ್ ಮೂಲಕ ಪರಿಹಾರ ನಿಗದಿಪಡಿಸಿರುವ ಮೌಲ್ಯವು ರಸ್ತೆ ವಿಸ್ತರಣೆ ಯೋಜನೆಯನ್ನು ಆರ್ಥಿಕವಾಗಿ ಕಾರ್ಯಸಾಧುವಲ್ಲದಂತೆ ಮಾಡಿದೆ ಎಂದು ಹೇಳಿದರು.

ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ. ಬೆಂಗಳೂರಿನ ನಗರ ಯೋಜನೆಗೆ ಕಠಿಣ ಸವಾಲನ್ನು ಒಡ್ಡುತ್ತದೆ. ಆದುದರಿಂದ ರಾಜ್ಯದ ಮೇಲಾಗುವ ತೀವ್ರ ಪರಿಣಾಮದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ರಸ್ತೆ ಅಗಲೀಕರಣದ ಈ ಯೋಜನೆಯನ್ನು ಬೆಂಗಳೂರು ಅರಮನೆ ಮೈದಾನದ (ಬಳಕೆ ಮತ್ತು ನಿಯಂತ್ರಣ) ಅಧ್ಯಾದೇಶ 2025 ಕಲಂ 3ರಂತೆ ಕೈಬಿಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಹಾಗೂ ಯೋಜನೆಗೆ ಬಳಸದೇ ಇರುವ ಜಮೀನನ್ನು ಬಿಬಿಎಂಪಿ ವೆಚ್ಚದಲ್ಲಿ ಪೂರ್ವಸ್ಥಿತಿಗೆ ತರಲು ನಿರ್ಧರಿಸಲಾಗಿದೆ. ಈಗಾಗಲೇ ಜಯಮಹಲ್ ರಸ್ತೆಯ ಅಂಡರ್ ಪಾಸ್‍ಗಾಗಿ ಉಪಯೋಗಿಸಿಕೊಂಡಿರುವ 1217.41 ಚ.ಮೀಟರ್ ವಿಸ್ತೀರ್ಣದ ಜಮೀನನ್ನು ಹಿಂದಿರುಗಿಸಲು ಸಾಧ್ಯವಾಗದೇ ಇರುವುದರಿಂದ ಅಧ್ಯಾದೇಶದ ಅನ್ವಯ ಕ್ರಮ ಕೈಗೊಳ್ಳಲು ಮತ್ತು ಸುಪ್ರೀಂಕೋರ್ಟ್ ಆದೇಶದಂತೆ ಈ ಪ್ರಕರಣದ ವೆಚ್ಚವನ್ನು 1 ಲಕ್ಷ ರೂ.ಗಳಂತೆ ದೂರುದಾರರಿಗೆ ಬಿಬಿಎಂಪಿ ವತಿಯಿಂದ ಪಾವತಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News