ಮುಡಾ ವಿಚಾರ | ವಿಪಕ್ಷಗಳ ಪಾದಯಾತ್ರೆಗೆ ಅಧಿಕೃತ ಒಪ್ಪಿಗೆ ಇಲ್ಲ : ಗೃಹ ಸಚಿವ ಜಿ.ಪರಮೇಶ್ವರ್

Update: 2024-07-29 13:03 GMT

ಜಿ.ಪರಮೇಶ್ವರ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅಧಿಕೃತ ಒಪ್ಪಿಗೆ ಇಲ್ಲ. ಆದರೆ, ಯಾರಿಗೂ ತೊಂದರೆ ಮಾಡದೇ ಪಾದಯಾತ್ರೆ ಮಾಡುವುದಾದರೆ ಮಾಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಆಡಳಿತ ಇದ್ದ ಸಂದರ್ಭದಲ್ಲಿಯೂ ಪಾದಯಾತ್ರೆಗೆ ಅವಕಾಶ ನೀಡಿರಲಿಲ್ಲ. ಇದೀಗ ಬಿಜೆಪಿ ಮತ್ತು ಬಿಜೆಪಿ ಪಕ್ಷಗಳು ಪಾದಯಾತ್ರೆ ಮಾಡಿದರೆ ಮಾಡಲಿ. ಆದರೆ ಅಧಿಕೃತವಾಗಿ ಅದಕ್ಕೆ ನಮ್ಮ ಪೊಲೀಸ್ ಇಲಾಖೆ ಅನುಮತಿ ಕೊಡಲ್ಲ. ಅನುಮತಿ ಕೊಟ್ಟರೆ ಕಾನೂನು ಸಮಸ್ಯೆಗಳಾಗಲಿವೆ ಎಂದು ಉಲ್ಲೇಖಿಸಿದರು.

ಇನ್ನೂ, ಪ್ರತಿಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ರಣತಂತ್ರವನ್ನು ಹೆಣೆದು ತಿರುಗೇಟು ಕೊಡುತ್ತದೆ. ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಆದ್ದರಿಂದ ನಾವೂ ರಾಜಕೀಯ ಮಾಡಬೇಕಾಗುತ್ತದೆ. ಆದರೆ, ಎಂದೂ ಸಹ ಸರಕಾರವನ್ನು ಬಳಸುವುದಿಲ್ಲ. ಪಕ್ಷದ ವತಿಯಿಂದ ಮಾಡುತ್ತೇವೆ ಎಂದು ಅವರು ವಿವರಿಸಿದರು.

ಬಿಬಿಎಂಪಿ ಕಸದ ಲಾರಿಗೂ ಇಬ್ಬರು ಬಲಿ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಅಪಘಾತ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ ಎಂದು ಅವರು ನುಡಿದರು.

ರಾಜ್ಯಕ್ಕೆ ಅನುದಾನ ಅನ್ಯಾಯವಾಗಿಲ್ಲ ಎಂಬ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಇದನ್ನು ಬೇಡ ಎನ್ನುವುದಿಲ್ಲ. ಆದರೆ, ಎಲ್ಲರಿಗೂ ಸಮಾನವಾಗಿ ಕೊಡಬೇಕು. ನಮ್ಮ ಪಾಲನ್ನು ನಮಗೆ ಕೊಡಿ ಎಂದು ಸುಪ್ರೀಂ ಕೋರ್ಟ್‍ವರೆಗೆ ತಲುಪಿದ್ದೇವೆ ಎಂದರು.

ಪ್ರಮುಖವಾಗಿ ಭದ್ರಾ ಯೋಜನೆಗೆ ಅನುದಾನ ನೀಡಬೇಕಿತ್ತು. ಆದರೆ, ಕೊಟ್ಟಿಲ್ಲ. ಈ ರೀತಿ ಮಲತಾಯಿ ಧೋರಣೆ ತೋರಿಸಿ, ಬೆಂಗಳೂರಿಗೆ ಬಂದು ಎಲ್ಲ ಕೊಡಲಾಗಿದೆ ಎಂದರೆ ಹೇಗೆ ಎಂದ ಅವರು, ಬೆಂಗಳೂರು ದೇಶದ ಪ್ರತಿಷ್ಠಿತ ನಗರ. ಬೆಂಗಳೂರನ್ನು ಕರ್ನಾಟಕಕ್ಕೆ ಸೀಮಿತ ಮಾಡಬಾರದು. ಇದನ್ನು ಪ್ರಪಂಚಕ್ಕೆ ತೋರಿಸಬೇಕಲ್ವಾ? ಎಂದು ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News