ನಾವೇನು ಸಿಎಂ ಬದಲಾವಣೆ ಮಾಡುವುದಿಲ್ಲ : ಆರ್‌.ಅಶೋಕ್‌ಗೆ ಗೃಹ ಸಚಿವ ಜಿ.ಪರಮೇಶ್ವರ್‌ ತಿರುಗೇಟು

Update: 2024-09-09 08:42 GMT

ಬೆಂಗಳೂರು : ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೇಕೆ ಬೇಕು. ಅವರ ಪಕ್ಷದಲ್ಲಿರುವ ವ್ಯತ್ಯಾಸ, ಜಗಳನ್ನು ಸರಿಪಡಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಿರುಗೇಟು ನೀಡಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವೇನು ಸಿಎಂ ಬದಲಾವಣೆ ಮಾಡುವುದಿಲ್ಲ. ಆ ಪಕ್ಷದವರೇ ಬದಲಾವಣೆ ಮಾಡುತ್ತಾರೆ. ನಮ್ಮ‌ ಪಕ್ಷವನ್ನು ನಾವು ನೋಡಿಕೊಳ್ಳುತ್ತೇವೆ. ಆರ್‌.ಅಶೋಕ್‌ ತಮ್ಮ‌ ಪಕ್ಷದಲ್ಲಿನ ಜಗಳ ಸರಿಪಡಿಸಿಕೊಳ್ಳಲಿ" ಎಂದು ಹೇಳಿದರು.

ಈಗಾಗಲೇ ಮುಖ್ಯಮಂತ್ರಿಗಳಿದ್ದಾರೆ : ಸಿಎಂ ಬದಲಾವಣೆಯ ಪ್ರಶ್ನೆ ಹುಟ್ಟಿಕೊಳ್ಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿದ್ದಾರೆ, ಆಡಳಿತ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದೆ, ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಆ ಬಗ್ಗೆ ಚರ್ಚೆ ಪ್ರಾರಂಭ ಮಾಡುವಂತಹ ಅಗತ್ಯ ಕಾಣುತ್ತಿಲ್ಲ ಎಂದು ಎಂದರು.

ಪ್ರತಿಯೊಬ್ಬ ಸಚಿವರು ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳಾಗಲಿ, ಸರ್ಕಾರದ ಕಾರ್ಯದರ್ಶಿಗಳು ಯಾರು ಸಹ ಸುಮ್ಮನೆ ಕುಳಿತಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ಇರುವುದರಿಂದ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಕ್ಕಿಲ್ಲ‌. ಆದರೆ, ಆಡಳಿತ ಸುಗಮವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು

ಇಲಾಖೆಯವರು ಉತ್ತರ ನೀಡುತ್ತಾರೆ : 

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿ ಅವರು, ಪರಿಸರದ‌ ಪ್ರಶ್ನೆ ಬರುವ ಭಾಗದಲ್ಲಿ ಕೆಲಸ ಮುಗಿದಿದೆ. ಇನ್ನೇನಿದ್ದರು ಬಯಲು ಸೀಮೆಯಲ್ಲಿ ಕೆಲಸಗಳು ನಡೆಯುತ್ತಿವೆ. ಪರಿಸರ ನಾಶ ಆಗುತ್ತಿದೆ ಎಂಬುದು ವನ್ಯಜೀವಿ ಮಂಡಳಿಯ ಪ್ರಶ್ನೆ. ಈವರೆಗೂ ನಾಶವಾಗದಂತೆ ಕೆಲಸ ಮಾಡಿಕೊಂಡು ಬರಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಉತ್ತರ ನೀಡುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News