ಹುಬ್ಬಳ್ಳಿ | ಕಾಲೇಜು ವಿದ್ಯಾರ್ಥಿನಿಯರ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟ ಪ್ರಕರಣ: ಆರೋಪಿ ರಜನಿಕಾಂತ್ ಬಂಧನ
ಹುಬ್ಬಳ್ಳಿ, ಆ.9: ನಗರದ ಖಾಸಗಿ ಕಾಲೇಜು ಒಂದರ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್ ಸ್ಟಾಗ್ರಾಮ್ ಮೂಲಕ ಹರಿಬಿಟ್ಟ ಪ್ರಕರಣದಲ್ಲಿ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
21 ವರ್ಷದ ರಜನಿಕಾಂತ್ ತಳವಾರ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು, ʼಕಡಿಮೆ ದಾಖಲಾತಿ ಇರುವ ಕಾರಣ ಆರೋಪಿಗೆ ಈ ಬಾರಿ ಕಾಲೇಜಿನಲ್ಲಿ ಅಡ್ಮಿಶನ್ ಕೊಟ್ಟಿರಲಿಲ್ಲ. ಬಾಯ್ ಫ್ರೆಂಡ್ ಇದ್ದ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆತ ಸುಮಾರು 10 ಮಂದಿ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿದ್ದ. ಸದ್ಯ ಆರೋಪಿಯ ಇಮೇಲ್ ಐಡಿ, ಸಾಮಾಜಿಕ ಜಾಲತಾಣಗಳ ವಿವರ ವಿಧಿ ವಿಜ್ಞಾನಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.
ʼಮೂರು ದಿನಗಳ ಹಿಂದೇಯೇ ವಶಕ್ಕೆ ಪಡೆದುಕೊಂಡಿದ್ದೇವೆ. ಆತನ ಜೊತೆ ಬೇರೆಯವರು ಇರಬಹುದು ಎಂಬ ಬಗ್ಗೆ ಅನುಮಾನ ಇದ್ದು, ಆ ಬಗ್ಗೆ ತನಿಖೆ ಮಾಡುತ್ತಿದ್ದೇವೆʼ ಎಂದು ತಿಳಿಸಿದರು.
ಆರೋಪಿಯು ತಾಕತ್ ಇದ್ದರೆ ತನ್ನನ್ನು ಬಂಧಿಸುವಂತೆ ಇನ್ ಸ್ಟಾಗ್ರಾಮ್ ನಲ್ಲಿ ಪೊಲೀಸರಿಗೆ ಸವಾಲು ಹಾಕಿದ್ದ. ಇದೀಗ ಹುಬ್ಬಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಜೂನ್ 20 ರಿಂದಲೇ ಆರೋಪಿಯು ಇನ್ ಸ್ಟಾಗ್ರಾಮ್ ನಲ್ಲಿ ``ಕಾಶ್ಮೀರಿ 1990_0'' ಹೆಸರಿನ ನಕಲಿ ಖಾತೆ ಸೃಷ್ಟಿಸಿ, ಹುಡುಗಿಯರ ಫೋಟೋ ಕೆಟ್ಟದಾಗಿ ಬಳಸಿರುವ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು . ಆದರೆ ಕಾಲೇಜು ಆಡಳಿತ ಮಂಡಳಿ ದೂರು ಕೊಡೋಕೆ ಹೋಗಿಲ್ಲ ಎಂದು ನಾಲ್ವರು ವಿದ್ಯಾರ್ಥಿಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.