ಟೀಕೆ, ವ್ಯಂಗ್ಯಗಳೆಲ್ಲವನ್ನು ಮೀರಿ ಶಕ್ತಿ ಯೋಜನೆ ದೊಡ್ಡ ಮಟ್ಟಿಗೆ ಯಶಸ್ವಿಯಾಗಿರುವುದು ಖುಷಿ ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸಿದ ಮಹಿಳೆಯರ ಟಿಕೆಟ್ ಮೌಲ್ಯ 1,000 ಕೋಟಿ ದಾಟಿದೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ʼʼಆರಂಭದಲ್ಲಿ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯಕ್ತವಾದ ಟೀಕೆ, ಅಪಪ್ರಚಾರ, ವ್ಯಂಗ್ಯಗಳೆಲ್ಲವನ್ನು ಮೀರಿ ಶಕ್ತಿ ಯೋಜನೆ ಇಷ್ಟು ದೊಡ್ಡ ಮಟ್ಟಿಗೆ ಯಶಸ್ವಿಯಾಗಿರುವುದು ಅತ್ಯಂತ ಖುಷಿ ಕೊಟ್ಟಿದೆʼʼ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ʼʼಮಹಿಳೆಯರ ಬದುಕು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ಅವರು ಪುರುಷರಿಗೆ ಸಮಾನರಾಗಿ ಉದ್ಯೋಗವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗಲೇ ಸುಸ್ಥಿರ ಅಭಿವೃದ್ಧಿ ಮತ್ತು ಸಮ ಸಮಾಜ ನಿರ್ಮಾಣ ಸಾಧ್ಯʼʼ ಎಂದು ಅವರು ಹೇಳಿದ್ದಾರೆ.
ʼʼನಾಡಿನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಉದ್ಯೋಗ, ಶಿಕ್ಷಣ ಸಂಬಂಧಿ ಪ್ರಯಾಣಗಳಿಗೆ ಯಾರ ಮೇಲೆಯೂ ಅವಲಂಬಿತರಾಗದೆ ಸ್ವಂತ ತೀರ್ಮಾನ ಕೈಗೊಂಡು ಸಂಚರಿಸಲು ಮುಕ್ತ ಅವಕಾಶ ನೀಡಿದ್ದು ನಮ್ಮ ಶಕ್ತಿ ಯೋಜನೆʼʼ ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
ʼಶಕ್ತಿ’ ಯೋಜನೆ ಎಂದಿಗೂ ನಿಲ್ಲುವುದಿಲ್ಲ; ಇದಕ್ಕೆ ನಾನೇ ಗ್ಯಾರಂಟಿʼʼ
‘ಶಕ್ತಿ’ ಯೋಜನೆ ಎಂದಿಗೂ ನಿಲ್ಲುವುದಿಲ್ಲ. ಈ ಬಗೆಗಿನ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪ ಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ ಎಂದರು.ಇನ್ನೂ, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರಕಾರ.ಇದಕ್ಕೆ ನಾನೇ ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.