ಹಿಂದೂ ಎಂದು ಹೇಳಿಕೊಳ್ಳುವ ಸ್ಪರ್ಧೆ ಸಂವಿಧಾನ ವಿರೋಧಿ: ಡಾ. ಪರಕಾಲ ಪ್ರಭಾಕರ್
ಬೆಂಗಳೂರು: ‘ಹಿಂದೂ ಎಂದು ಬಿಜೆಪಿ ಜತೆ ಬೇರೆ ಪಕ್ಷದ ನಾಯಕರು ಸ್ಪರ್ಧೆಗಿಳಿದು ಹೇಳಿಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ಖ್ಯಾತ ರಾಜಕೀಯ ಅರ್ಥಶಾಸ್ತ್ರಜ್ಞ ಡಾ. ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಬುಧವಾರ ಗಾಂಧಿ ಭವನ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಆಯೋಜಿದ್ದ, ‘2014ರ ನಂತರದ ಭಾರತ: ಭ್ರಮೆಯೇ ವಾಸ್ತವವಾಗಿ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯು ಇತರರನ್ನು ಹುಸಿ ಜಾತ್ಯತೀತವಾದಿಗಳೆಂದು ಛಾಡಿಸುತ್ತಿತ್ತು. ಉಳಿದವರು ತಾವೂ ‘ಸೆಕ್ಯುಲರ್’ ಎಂದು ಗಟ್ಟಿಯಾಗಿ ಧ್ವನಿಗೂಡಿಸುತ್ತಿದ್ದರು. ಈಗ ಸಂಪೂರ್ಣ ಬದಲಾಗಿದ್ದು, ಬಿಜೆಪಿ ಮಾತ್ರ ಹಿಂದೂ ಅಲ್ಲ. ನಾವೂ ಹಿಂದೂವೇ ಎಂದು ಹೇಳಿಕೊಳ್ಳಲು ಈಗ ಸ್ಪರ್ಧೆ ಆರಂಭವಾಗಿದೆ. ಆದರೆ, ಇದು ಸಂಪೂರ್ಣವಾಗಿ ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನವನ್ನು ರೂಪಿಸಿದ ಮೌಲ್ಯಗಳಿಗೆ ವಿರೋಧವಾಗಿದೆ ಎಂದು ನುಡಿದರು.
ಕೇಂದ್ರ ಸರಕಾರ ಪ್ರತಿ ವಿಚಾರ, ಕ್ಷೇತ್ರಗಳ ಬಗೆಗಿನ ವಾಸ್ತವವನ್ನು ಜನರಿಗೆ ತಿಳಿಸದೆ, ಭ್ರಮೆಗಳನ್ನು ಸೃಷ್ಟಿಸುತ್ತಿದೆ.ಅದರಲ್ಲೂ ದೇಶ ಯುವ ಜನತೆ ಪೈಕಿ ಶೇ.24ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರಪಂಚದಲ್ಲೇ ಹೆಚ್ಚಾಗಿದ್ದು, ಇರಾನ್, ಲೆಬನಾನ್, ಸಿರಿಯಾ ದೇಶಗಳಿಗಿಂತೂ ಹೆಚ್ಚು ಜನ ಇಲ್ಲಿ ನಿರುದ್ಯೋಗ ಸಮಸ್ಯೆಗೆ ಸಿಲುಕಿದ್ದಾರೆ. ನೆರೆಯ ಬಾಂಗ್ಲಾದೇಶದ ನಿರುದ್ಯೋಗದ ಪ್ರಮಾಣವೂ ಬರೀ ಶೇ.12ರಷ್ಟು ಇದೆ. ಆದರೂ, ಕೇಂದ್ರ ಸರಕಾರ ಈ ವಾಸ್ತವವನ್ನು ಮರೆಮಾಚಿ, ಆರ್ಥಿಕತೆಯಲ್ಲಿ ನಮ್ಮ ದೇಶ ಮುಂದುವರಿಯುತ್ತಿದೆ ಎಂಬ ಭ್ರಮೆ ಹರಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಅದೇ ರೀತಿ, ನಮ್ಮ ಹಣದುಬ್ಬರದ ದರ ಎದುರಿಸಲು ಸಾಧ್ಯವಾಗದ ಮಟ್ಟಕ್ಕೆ ಏರಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆಂತರಿಕ ಉಳಿತಾಯ ದರ ಶೇ.5ಕ್ಕಿಂತಲೂ ಅಧಿಕವಾಗಿದೆ ಎಂದ ಅವರು, ನಮ್ಮ ದೇಶ ಸಂಸದೀಯ ವ್ಯವಸ್ಥೆ ಹೊಂದಿದೆ. ಆದರೆ ಇಂದು ಕಾನೂನುಗಳನ್ನು ಯಾವುದೇ ಚರ್ಚೆಗಳಿಲ್ಲದೆಯೇ ಪಾಸ್ ಮಾಡಲಾಗುತ್ತಿದೆ. ಪ್ರಶ್ನಿಸಿದವರನ್ನು ಸಂಸತ್ತಿನಿಂದಲೇ ಅಮಾನತು ಮಾಡಲಾಗುತ್ತಿದೆ ಎಂದು ಪರಕಾಲ ಪ್ರಭಾಕರ್ ಹೇಳಿದರು.
ಮೂರು ಕರಾಳ ಕೃಷಿ ಕಾನೂನನ್ನು ಜಾರಿಗೊಳಿಸಲಾಯಿತು. ರೈತರು ವಿರೋಧ ವ್ಯಕ್ತಪಡಿಸಿ ನಿರಂತರ ಪ್ರತಿಭಟನೆ ನಡೆಸಿದ್ದರಿಂದ ಹಿಂದೆ ಪಡೆಯುವುದಾಗಿ ಪ್ರಧಾನಿಗಳು ಟಿವಿ ಮಾಧ್ಯಮದ ಪರದೆಯ ಮೂಲಕ ಘೋಷಿಸಿದರು. ಆ ಬಳಿಕ ಯಾವುದೇ ರೀತಿಯ ಚರ್ಚೆ ಇಲ್ಲದೆಯೇ ವಾಪಸ್ ಪಡೆಯಲಾಯಿತು. ಜಾರಿಗೆ ತಂದ ಉದ್ದೇಶವಾಗಲೀ, ಹಿಂದೆ ಪಡೆದ ಉದ್ದೇಶವಾಗಲೀ ಸರಕಾರ ಈವರೆಗೆ ತಿಳಿಸಿಲ್ಲ. ಇದು ನಿಜಕ್ಕೂ ಅಪಾಯಕಾರಿ ಸನ್ನಿವೇಶ ಎಂದು ನುಡಿದರು.
ಬಡತನ, ಹಸಿವಿನ ಸೂಚ್ಯಂಕ ಹೆಚ್ಚಾಗುತ್ತಿದೆ. ಆದರೆ ಈ ವಾಸ್ತವಾಂಶಗಳನ್ನು ಸರಕಾರ ವ್ಯವಸ್ಥಿತವಾಗಿ ಮರೆಮಾಚುತ್ತಿದೆ. ಭಾರತ ಜಗತ್ತಿನಲ್ಲೇ ಮುಂದುವರಿಯುತ್ತಲಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂಬ ಭ್ರಮೆಯನ್ನು ವ್ಯವಸ್ಥಿತವಾಗಿ ತೇಲಿ ಬಿಡಲಾಗುತ್ತಿದೆ. ವಾಸ್ತವಗಳನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಪರಕಾಲ ಪ್ರಭಾಕರ್ ಕರೆ ನೀಡಿದರು.
ಹಾಗೇ, ಈ ದೇಶದಲ್ಲಿ ಶೇಕಡ ನೂರಕ್ಕೆ ನೂರು ಬಯಲು ಶೌಚ ಮುಕ್ತ ಗ್ರಾಮಗಳಿವೆ ಎಂದು ಪ್ರಕಟಿಸಲಾಯಿತು. ಇದು ಸಹ ವಾಸ್ತವವಲ್ಲ ಎಂದು ಹೇಳಿದ ಅಧಿಕಾರಿಯನ್ನು ತೆಗೆದು ಹಾಕಲಾಯಿತು. ಅಲ್ಲದೆ, ಯಾವುದೇ ತಳಹದಿಯಿಲ್ಲದೇ ಜನರನ್ನು ನೀವು ದೊಡ್ಡ ಶಬ್ದಗಳು, ಸಂಸ್ಕೃತದ ಶಬ್ದಗಳನ್ನು ಬಳಸಿ ಮೂರ್ಖರನ್ನಾಗಿಸಬಹುದು.ಆದರೆ, ಪ್ರತಿದಿನ ಸಾಧ್ಯವಿಲ್ಲ, ಜನ ಸಮುದಾಯ ಎಚ್ಚೆತ್ತುಕೊಳ್ಳಲಿದೆ ಎಂದೂ ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಪೂರ್ಣಾ, ಗಂಗಾಧರ್ ಮುಳುಗಂದ್, ಜಾಗೃತ ಕರ್ನಾಟಕ ಸಂಚಾಲಕ ಡಾ.ಬಿ.ಸಿ.ಬಸವರಾಜು ಸೇರಿದಂತೆ ಪ್ರಮುಖರಿದ್ದರು.
ಗಲ್ಲಿ ಗಲ್ಲಿಗೆ ಮುಸ್ಲಿಮ್ ವಿರೋಧಿ ವಾತಾವರಣ:
‘ನಾನು ಹೈದರಾಬಾದಿನಲ್ಲಿ ಒಂದು ಓಲಾ ಕಾರನ್ನು ಬಾಡಿಗೆಗೆ ಪಡೆದು ಹೊರಟೆ. ರಾಯಲಸೀಮೆ ಭಾಗದ 30 ವರ್ಷದ ಯುವಕನೋರ್ವ ಆ ಕಾರಿನ ಚಾಲಕನಾಗಿದ್ದ. ಆತನಿಗೆ ಹೈದರಾಬಾದ್ ರಸ್ತೆಗಳ ಕುರಿತು ಗೊತ್ತಿರದೇ ಇದ್ದುದರಿಂದ, ಗೂಗಲ್ ಮ್ಯಾಪ್ ನೋಡಿಕೊಂಡು ಹೊರಟಾಗ ಸಣ್ಣ ಸಣ್ಣ ಗಲ್ಲಿಗಳೊಳಗೆ ಕಾರು ಹೋಯಿತು.
ಆಗ ಚಾಲಕ ನನ್ನತ್ತ ತಿರುಗಿ ಹೇಳಿದ ‘ಸಾರ್, ಈ ಮುಸ್ಲಿಮ್ ಜನರನ್ನು ನೋಡಿ, ಕಾರಿಗೆ ಜಾಗ ಕೊಡದೇ ಬೀದಿಯಲ್ಲಿ ನಡೆಯುತ್ತಿದ್ದಾರೆ’ ಎಂದ. ಆತ, ರಾಯಲಸೀಮೆಯವನು, ನನಗೆ ಗೊತ್ತಿರುವ ಹಾಗೆ ಆ ಭಾಗದಲ್ಲಿ ಯಾವ ಕೋಮುವಾದವೂ ಇಲ್ಲ. ಆತ ಯಾವ ಸಂಘಟನೆಗೂ ಸೇರಿದವನಲ್ಲ. ಅಂತಹ ಸಣ್ಣ ದಾರಿಯಲ್ಲಿ ನಾನು ಹಿಂದೂ, ಜೈನ, ಕ್ರಿಶ್ಚಿಯನ್, ಬೌದ್ಧ, ಯಾರೇ ಆಗಿದ್ದರೂ ಹೀಗೆ ನಡೆದುಹೋಗುತ್ತಿದ್ದರು. ಆದರೆ ಈತನಿಗೆ ಅವರು ಮುಸ್ಲಿಮರಾಗಿದ್ದರಿಂದ ಹಾಗೆ ಮಾಡುತ್ತಿದ್ದಾರೆ ಎಂದು ಏಕೆ ಅನ್ನಿಸಿದೆ? ಏಕೆಂದರೆ ಇದು ಈ ದೇಶದಲ್ಲಿ ಕೋಮುವಾದ, ಮುಸ್ಲಿಮ್ ವಿರೋಧಿ ಗಲ್ಲಿ ಗಲ್ಲಿಗೆ ತಲುಪಿದೆ’
-ಪರಕಾಲ ಪ್ರಭಾಕರ್, ರಾಜಕೀಯ ಅರ್ಥಶಾಸ್ತ್ರಜ್ಞ