ಇಂಡಿಯಾ ಒಕ್ಕೂಟ ಸೂಕ್ತ ನಾಯಕತ್ವ ಇಲ್ಲದೆ ದಿಕ್ಕು ತಪ್ಪಿದಂತಾಗಿದೆ : ಆರ್.ಅಶೋಕ

Update: 2024-03-23 06:54 GMT

Photo: fb.com/RAshoka

ಬೆಂಗಳೂರು:ಇತ್ತೀಚೆಗೆ ನಡೆದ 4 ರಾಜ್ಯಗಳ ಚುನಾವಣಾ ಸೆಮಿಫೈನಲ್‍ನಲ್ಲಿ 3 ರಾಜ್ಯಗಳನ್ನು ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ ಸೆಮಿಫೈನಲ್‍ನಲ್ಲಿ ಸೋತು ಸುಣ್ಣವಾಗಿದೆ. ನಾವಂತೂ ಫೈನಲ್‍ಗೆ ತಲುಪಿದ್ದೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಹೇಳಿದ್ದಾರೆ.

ಶನಿವಾರ ಬಿಜೆಪಿ ಲೋಕಸಭಾ ಚುನಾವಣೆ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ವಿಪಕ್ಷಗಳ ಇಂಡಿಯಾ ಒಕ್ಕೂಟದ ಜೊತೆಗೆ ಶಸ್ತ್ರಸಜ್ಜಿತರಾಗಿದ್ದ ನಿತೀಶ್ ಕುಮಾರ್ ಅಲ್ಲಿ ಶಸ್ತ್ರತ್ಯಾಗ ಮಾಡಿ ನಮ್ಮ ಜೊತೆ ಬಂದಿದ್ದಾರೆ. ‘ಇಂಡಿಯಾ’ ಒಕ್ಕೂಟವು ನಾಯಕತ್ವ ಇಲ್ಲದೆ, ದಿಕ್ಕು ಕಾಣದಂತಿದೆ. ಮ್ಯಾಚ್, ಮ್ಯಾಚಿನ ದಿನಾಂಕ ಫಿಕ್ಸ್ ಆಗಿದೆ. ಆಟಗಾರರೂ ಫಿಕ್ಸ್ ಆಗಿದ್ದಾರೆ. ಸಾರ್ವಜನಿಕರೂ ಫಿಕ್ಸ್ ಆಗಿದ್ದಾರೆ. ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿಯವರು ಎಂದು ನಿಗದಿಯಾಗಿದೆ. ಜನರ ಭಾವನೆ, ಜನಮಿಡಿತದೊಂದಿಗೆ ಮೋದಿಯವರು ಗೆಲ್ಲಲಿದ್ದಾರೆ. ಅವರ ಕ್ಯಾಪ್ಟನ್ ಇನ್ನೂ ಫಿಕ್ಸ್ ಆಗಿಲ್ಲ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲೂ ನಮಗೆ ಒಳ್ಳೆಯ ವಾತಾವರಣ ಇದೆ. 10 ತಿಂಗಳಲ್ಲಿ 10 ತಪ್ಪು, 10 ಭ್ರಷ್ಟಾಚಾರಗಳನ್ನು, ಸಮಾಜದ್ರೋಹಿಯಾದ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ. ನಾಯಕತ್ವ ಘೋಷಣೆ ಆಗುವ ಮೊದಲೇ ಮ್ಯಾಚ್ (ಚುನಾವಣೆ) ನಡೆಯಲಿದ್ದು, ಇಂಡಿಯಾ ಒಕ್ಕೂಟ ಸೋತು ಸುಣ್ಣವಾಗಲಿದೆ. ಎಂದರು.

ಮಂಡ್ಯದಲ್ಲಿ ಹನುಮ ಧ್ವಜ ಇಳಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ರಾಮ ಜನ್ಮಭೂಮಿಯ ಕೇಸನ್ನು 24 ವರ್ಷಗಳ ಬಳಿಕ ಕೆದಕಿ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ್ದು, ಅವರು ಕಾಂಗ್ರೆಸ್ ಕಾರ್ಯಕರ್ತರೆಂದು ಸಾಬೀತಾಗಿದೆ ಎಂದು ತಿಳಿಸಿದರು.

ಚುನಾವಣೆ ಬಂದಾಗ ಪ್ರಚಾರ ಬೇಕೇ ಬೇಕು. ಅದೇರೀತಿ ಸುಳ್ಳು ಸುದ್ದಿಗಳು ಬಂದಾಗ ಅದಕ್ಕೆ ಸ್ಪಷ್ಟನೆ ನೀಡುವುದು ಪಕ್ಷದ ಕರ್ತವ್ಯ. ಇವೆರಡನ್ನು ಒಂದೇ ಜಾಗದಲ್ಲಿ ಮಾಡಲಾಗುವುದು ಎಂದರು.

ಬಿಜೆಪಿ ನಿರಂತರವಾಗಿ ಮಾಧ್ಯಮ ಸ್ನೇಹಿಯಾಗಿ ಕೆಲಸ ಮಾಡಿದೆ. ಪ್ರತಿ ಚುನಾವಣಾ ಸಂದರ್ಭದಲ್ಲೂ ಈ ರೀತಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗುತ್ತಿದೆ. ಇದು ಮಾಧ್ಯಮದವರಿಗೆ ನೆರವಾಗಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News