ಜಲಾಶಯಗಳು ಬರಿದಾಗಲು ಹಿಂದಿನ ಸರಕಾರದ ಅಶಿಸ್ತಿನ ನಿರ್ವಹಣೆ ಕಾರಣ: ಸಚಿವ ಕೃಷ್ಣಭೈರೇಗೌಡ

Update: 2023-07-21 13:14 GMT

ಬೆಂಗಳೂರು, ಜು.21: ಹಿಂದಿನ ಬಿಜೆಪಿ ಸರಕಾರ ರಾಜ್ಯದ ಎಲ್ಲ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ. ಇದರ ಪರಿಣಾಮ ಜಲಾಶಯಗಳು ಬಹುತೇಕ ಬರಿದಾಗಿವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಟೀಕಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನೀರಿನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷಾಂತ್ಯದ ಡಿಸೆಂಬರ್ ವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳಿಗೆ ನೀರಿನ ಹರಿವು ಭರಪೂರವಾಗಿತ್ತು. ಆದರೆ, ಹಿಂದಿನ ಸರಕಾರ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ. ನೀರಿನ್ನು ಬೇಕಾಬಿಟ್ಟಿ ನಾಲೆಗಳಿಗೆ ಹರಿಸಿದೆ. ಪರಿಣಾಮ ಬಹುತೇಕ ಜಲಾಶಯಗಳು ಖಾಲಿಯಾಗಿವೆ ಎಂದು ಅಸಮಾಧಾನ ಹೊರಹಾಕಿದರು.

ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗದ ಕಾರಣ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಕುಸಿದಿತ್ತು. ಆದರೆ, ಜುಲೈನಲ್ಲಿ ಉತ್ತಮ ಮಳೆಯಾಗಿದೆ. ಕಾವೇರಿಯ ನಾಲ್ಕು ಜಲಾಶಯಗಳಿಗೆ 18,617 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಕೃಷ್ಣ ನದಿಯ 6 ಜಲಾಶಯಗಳಿಗೆ 76,264 ಕ್ಯೂಸೆಕ್ಸ್ ನೀರಿನ ಹರಿವಿದೆ. ಆಲಮಟ್ಟಿಗೂ 32,146 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಘಟಪ್ರಭ-ಮಲಪ್ರಭದಲ್ಲೂ ನೀರಿನ ಒಳಹರಿವು ಹಣನೀಯವಾಗಿ ಹೆಚ್ಚಾಗಿದೆ.

ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕಿಲ್ಲ. ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸುವ ‘ಬಹುಗ್ರಾಮ ಕುಡಿಯುವ ನೀರು’ ಯೋಜನೆಗೆ ಯಾವುದೇ ಆತಂಕ ಇಲ್ಲ. ಆದರೆ, ಹಲವು ಸದಸ್ಯರ ಭಿತ್ತನೆಯಾಗಿರುವ ಬೆಳೆಗೆ ನೀರು ಹರಿಸುವಂತೆ ಹಲವು ಸದಸ್ಯರು ಮನವಿ ಮಾಡುತ್ತಿದ್ದಾರೆ. ಸದ್ಯಕ್ಕೆ ನಾಲೆಗಳಿಗೆ ನೀರು ಹರಿಸುವಷ್ಟು ನೀರಿನ ಶೇಖರಣೆ ಜಲಾಶಯಗಳಲ್ಲಿ ಇಲ್ಲ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News