‘ಸೆಸ್’ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ಕೇಂದ್ರ ಸರಕಾರವು ವರ್ಷಕ್ಕೆ 2.50 ಲಕ್ಷ ಕೋಟಿ ರೂ.ಗಳಷ್ಟು ಅಗಾಧ ಸೆಸ್ ಸಂಗ್ರಹಿಸುತ್ತಿದ್ದರೂ ಅದರ ಹಂಚಿಕೆಯಲ್ಲಿ ಕರ್ನಾಟಕದಂತಹ ಪುರೋಗಾಮಿ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ರವಿವಾರ ಈ ಸಂಬಂಧ ‘ಎಕ್ಸ್'ನಲ್ಲಿ ಪೋಸ್ಟ್ ಹಾಕಿರುವ ಅವರು, ಸೆಸ್/ತೆರಿಗೆ ಪಾವತಿಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಆದರೆ, ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಈ ರಾಜ್ಯಗಳಿಗೆ ನ್ಯಾಯೋಚಿತ ಪಾಲು ಬರುತ್ತಿಲ್ಲ. ಬದಲಿಗೆ ಹೆಚ್ಚಿನ ಪಾಲೆಲ್ಲ ಉತ್ತರಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಹೋಗುತ್ತಿದೆ. ಇದು ಖಂಡಿತವಾಗಿಯೂ ಪ್ರಶ್ನಾರ್ಹ ಎಂದು ಹೇಳಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರ್ನಾಟಕದಂತಹ ರಾಜ್ಯಗಳು ತಮಗೆ ಬರಬೇಕಾದ ತೆರಿಗೆ ಪಾಲಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕಾದ ಪ್ರಮೇಯ ಬರುತ್ತದೆ ಎಂದು ಪಾಟೀಲ್ ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.