ಜಾಮೀನು ಮಂಜೂರು ಮಾಡಿ ತನಿಖೆಗೆ ಸಹಕರಿಸಲು ಷರತ್ತು ವಿಧಿಸುವುದು ಸೂಕ್ತ: ಹೈಕೋರ್ಟ್

Update: 2023-09-03 18:18 GMT

ಬೆಂಗಳೂರು: ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವವರಿಗೆ ನಿರಾಕರಣೆ ಮಾಡುವ ಬದಲು ಮಂಜೂರು ಮಾಡಿ ತನಿಖೆಗೆ ಸಹಕರಿಸಲು ಷರತ್ತುಗಳನ್ನು ವಿಧಿಸುವುದು ಸೂಕ್ತ ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮುಹಮ್ಮದ್ ಅಸ್ಮತುಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠವು ಈ ಸೂಚನೆ ನೀಡಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಅರ್ಜಿದಾರರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ಆಧಾರಗಳಿಲ್ಲ. ಆದರೂ, ಅರ್ಜಿದಾರರು ಮುಖ್ಯಸ್ಥರಾಗಿರುವ ಸಂಸ್ಥೆಗೆ ದೊಡ್ಡಮಟ್ಟದ ಹಣ ವರ್ಗಾವಣೆಯಾಗಿದೆ. ಈ ಕುರಿತಂತೆ ತನಿಖೆ ನಡೆಸಬೇಕಾಗಿದೆ. ಹೀಗಾಗಿ ಅರ್ಜಿದಾರರಿಗೆ ಅಗತ್ಯ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದಲ್ಲಿ ವಿಚಾರಣೆ ಹಾಗೂ ತನಿಖೆಗೂ ಸಹಕಾರಿಯಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜೊತೆಗೆ, ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಬೇಕು. ಆಗ ತನಿಖೆಯ ಉದ್ದೇಶವೂ ಈಡೇರಲಿದೆ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಮುಂದಿನ 15 ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. 5 ಲಕ್ಷ ರೂ.ಗಳ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಗಳನ್ನು ನಾಶ ಮಾಡಬಾರದು ಹಾಗೂ ಪ್ರತಿ ತಿಂಗಳಲ್ಲಿ ಮೊದಲ ಶನಿವಾರ ತನಿಖೆ ನಡೆಸುತ್ತಿರುವ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಸಹಿ ಹಾಕಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

ಅರ್ಜಿದಾರರು ಸಿಜಿಆರ್‍ಸಿಎಂಎಲ್ ಕಂಪೆನಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿದ್ದರು. ಹೈದರಾಬಾದ್ ಮೂಲದ ವಿನ್ವೆ ಅಗ್ರಿ ಟ್ರೇಡರ್ಸ್ ಸಂಸ್ಥೆಯಿಂದ 17 ಕೋಟಿ ರೂ.ಗಳನ್ನು ಅವರ ಖಾತೆಗೆ ಸ್ವೀಕರಿಸಿದ್ದರು. ಆದರೆ, ಈ ಮೊತ್ತವನ್ನು ರೈತರಿಗೆ ಸಾಲ ಮಂಜೂರು ಮಾಡುವುದಾಗಿ ನಂಬಿಸಿ ಕಂಪೆನಿಗೆ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News