ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ, ನಾಳೆ ನಿರ್ಧಾರ ಪ್ರಕಟಿಸುತ್ತೇನೆ: ಡಿ.ವಿ. ಸದಾನಂದಗೌಡ

Update: 2024-03-18 14:13 GMT

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಹಾಲಿ ಸಂಸದ ಡಿ.ವಿ. ಸದಾನಂದಗೌಡ, ನಾಳೆ(ಮಾ.19) ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಸೋಮವಾರ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದ ಬಳಿ ಅಭಿಮಾನಿಗಳು, ಹಿತೈಷಿಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ತಮ್ಮ 72ನೆ ಜನ್ಮದಿನ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೆಲವು ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಆದರೆ, ವೈಯಕ್ತಿಕವಾಗಿ ನಾನು ಯಾವುದೆ ನಿರ್ಧಾರವನ್ನು ಈಗ ತೆಗೆದುಕೊಳ್ಳುವುದಿಲ್ಲ. ಕುಟುಂಬ ಸದಸ್ಯರ ಜತೆ ಚರ್ಚಿಸಿದ ಬಳಿಕ ನಾನು ಮುಂದಿನ ತೀರ್ಮಾನವನ್ನು ಪ್ರಕಟಿಸುತ್ತೇನೆ ಎಂದರು.

ಬಿಜೆಪಿ ಪ್ರಮುಖ ಮುಖಂಡರೊಬ್ಬರು ನಿನ್ನೆ ನಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಅವರ ಜೊತೆ ನಡೆದ ಮಾತುಕತೆಯ ವಿವರವನ್ನು ನಾನು ಹೇಳುವುದಿಲ್ಲ. ಇವತ್ತೆ ಎಲ್ಲವನ್ನೂ ಹೇಳಿಬಿಟ್ಟರೆ ನಾಳೆ ಏನು ಉಳಿಯುವುದಿಲ್ಲ. ಆದುದರಿಂದ, ನಾಳೆ ಎಲ್ಲ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಸದಾನಂದಗೌಡ ತಿಳಿಸಿದರು.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಸಂದರ್ಭದಲ್ಲೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಂಡಾಯ ಸಾರಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಯಾರಿಗೆಲ್ಲ ಅನ್ಯಾಯ ಅಗಿದೆಯೋ, ಅವರೆಲ್ಲ ಸೇರಿ ಹೈಕಮಾಂಡ್ ಬಳಿ ಹೋಗೋಣ ಎಂದು ಈಶ್ವರಪ್ಪಗೆ ತಿಳಿಸಿದ್ದೆ. ಆದರೆ, ಅವರು ಈಗಾಗಲೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅದರ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಲು ನಡೆಸಿದಂತಹ ಸಮೀಕ್ಷೆಯಲ್ಲಿ ಕೇವಲ ನನ್ನ ಹೆಸರು ಮಾತ್ರ ವರದಿಯಲ್ಲಿ ಬಂದಿತ್ತು. ನನಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ, ಕೊನೆ ಕ್ಷಣದಲ್ಲಿ ನನ್ನ ರಕ್ಷಣೆಗೆ ಬಂದಿಲ್ಲ. ದಿಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ನಡೆದ ಕೆಲವು ವಿದ್ಯಾಮಾನಗಳು ನನ್ನ ಗಮನಕ್ಕೆ ಬಂದಿದೆ ಎಂದು ಸದಾನಂದಗೌಡ ತಿಳಿಸಿದರು.

ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಲು ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ ತಿಳಿದು ಹೀಗೆ ಮಾಡಿರುವುದರಿಂದ ಬೇಸರವಾಗಿದೆ ಎಂದು ಸದಾನಂದಗೌಡ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಅನ್ನು ತಮ್ಮ ಬದಲು ಶೋಭಾ ಕರಂದ್ಲಾಜೆಗೆ ನೀಡಿರುವುದು ಸದಾನಂದಗೌಡ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿನ ಅಸಮಾಧಾನವನ್ನು ಬಳಸಿಕೊಳ್ಳಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮುಖಾಂತರ, ಸದಾನಂದಗೌಡ ಅವರಿಗೆ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸದಾನಂದಗೌಡ ಕಾಂಗ್ರೆಸ್ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸದಾನಂದಗೌಡರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News