ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ: ಶಂಕರ್ ಪಾಟೀಲ್ ಮುನೇನಕೊಪ್ಪ
ಹುಬ್ಬಳ್ಳಿ: ʼʼಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ಆದಿಯಾಗಿ ನನಗೆ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಕರೆದಿಲ್ಲ. ನಾನು ಕಾಂಗ್ರೆಸ್ ಹೋಗಬೇಕು ಅನ್ನೋದು ನನ್ನ ಮನಸ್ಸಿನಲ್ಲಿ ಇಲ್ಲʼʼ ಎಂದು ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼನನಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಗಬೇಕು ಅನ್ನೋ ಇಚ್ಚೆ ಇಲ್ಲ. ಆದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ, ಅದಂತೂ ಸತ್ಯʼʼ ಎಂದು ಹೇಳಿದರು.
ʼʼನನ್ನನ್ನು ಬಿಜೆಪಿಗೆ ಕರೆದುಕೊಂಡು ಬಂದವರು ಚಿಕ್ಕನಗೌಡರ್, ನಿಂಬಣ್ಣವರ್, ಜಗದೀಶ್ ಶೆಟ್ಟರ್. ಆದರೆ ಈಗ ಧಾರಾವಾಡ ಜಿಲ್ಲೆಯಲ್ಲಿ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಇವತ್ತು ಪ್ರಹ್ಲಾದ್ ಜೋಶಿ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇವತ್ತು ಮುಂಜಾನೆ ನಾನು ಅವರ ಜೊತೆ ಮಾತಾಡಿದ್ದೇನೆ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೊಗೋ ಜವಾಬ್ದಾರಿ ಜೋಶಿ ಅವರ ಮೇಲಿದೆ. ತಾವೇ ಕಟ್ಟಿದ ಪಕ್ಷ ಬಿಟ್ಟು ಹೋಗೋದು ಬಹಳ ನೋವಿನ ಸಂಗತಿʼʼ ಎಂದು ಅವರು ನುಡಿದರು.
ಅನಂತಕುಮಾರ್ ಅವರು ಈಗ ನಮ್ಮ ಜೊತೆ ಇಲ್ಲ, ಜಗದೀಶ್ ಶೆಟ್ಟರ್ ನಮ್ಮ ಪಕ್ಷದಲ್ಲಿ ಇಲ್ಲ. ಹೀಗಾಗಿ ಜೋಶಿ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದ ಅವರು, ಕಾರ್ಯಕರ್ತರಿಗೆ ನೋವಾದ್ರೆ ನಮಗೆ ಸಂಕಟ ಆಗುತ್ತೆ. ನಾನು ಏನೇ ಆದರೂ ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು ಎಂದು ತಿಳಿಸಿದರು.
ʼʼಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನಮ್ಮ ಬೆಳವಣಿಗೆಗೆ ಕಾರಣ. ನಾನು ಲೋಕಸಭೆಗೆ ಸ್ಪರ್ಧೆ ಮಾಡೋ ಬಗ್ಗೆ ಜನವರಿಯಲ್ಲಿ ತಿಳಿಸುವೆ. ಹಿರಿಯರು ಪಕ್ಷ ಬಿಟ್ಟು ಹೋಗಿರೋದಕ್ಕೆ ಗೊಂದಲ ಇದೆʼʼ ಎಂದು ಹೇಳಿದರು.