ಸೈಬರ್ ಅಪರಾಧ ತಡೆಗೆ ಐಟಿ ಕಾನೂನು ಬಿಗಿ: ಡಾ. ಜಿ. ಪರಮೇಶ್ವರ್
ಮಂಗಳೂರು, ಅ. 29: ಬ್ಯಾಂಕ್ ಖಾತೆ ವಂಚನೆ, ಹ್ಯಾಕಿಂಗ್, ಸುಳ್ಳು ಸುದ್ದಿ, ವೈಯಕ್ತಿಕ ಖಾತೆಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಕಳುಹಿಸುವುದು ಸೇರಿದಂತೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಕಠಿಣ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಸಂಬಂಧ ರಚಿಸಲಾದ ಸಮಿತಿಯು ಕ್ರಮ ವಹಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಸೈಬರ್ ಅಪರಾಧಿಗಳು ದೇಶ, ರಾಜ್ಯದ ಗಡಿಯನ್ನು ಮೀರಿ ಕಾರ್ಯಾಚರಿಸುತ್ತಿದ್ದಾರೆ. ದೇಶದಲ್ಲಿಯೇ ಮೊದಲಾಗಿ ಕರ್ನಾಟಕ ರಾಜ್ಯದಲ್ಲಿ ಸೈಬರ್ ಕ್ರೈಂ ಠಾಣೆ ಆರಂಭಿಸಲಾಗಿತ್ತು. ಬಳಿಕ ಎಲ್ಲಾ ಜಿಲ್ಲೆಗಳಲ್ಲೂ ಠಾಣೆಗಳು ಆರಂಭಗೊಂಡು ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಐಟಿ ಮತ್ತು ಗೃಹ ಇಲಾಖೆಯು ಸೇರಿ ಸಮಿತಿ ರಚಿಸಿದ್ದು ಸೂಕ್ತ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ ಎಂದು ಅವರು ಹೇಳಿದರು.
ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ ಬಳಿಕ ಎಇಪಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ ಎಂಬ ದೂರಿನ ಕುರಿತಂತೆ ತನಿಖೆ ನಡೆಯುತ್ತಿದೆ. ಮಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಿಂದ ಎಇಪಿಎಸ್ ಮೂಲಕ ಹಣ ವಂಚನೆಗೆ ಸಂಬಂಧಿಸಿ ಬಿಹಾರ ಮೂಲದ ಮೂರು ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ಇಲಾಖೆಯಲ್ಲಿನ್ನು ಜ್ಞಾನವಂತ, ಆಧುನಿಕ ಪೊಲೀಸರು
ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸುವ ಉದ್ದೇಶ ಸರಕಾರದ್ದಾಗಿದ್ದು, ಪೊಲೀಸ್ ಕಚೇರಿಗಳ ಜತೆ ಅಧಿಕಾರಿ, ಸಿಬ್ಬಂದಿಯೂ ಉನ್ನತ ಶಿಕ್ಷಣ ಹಾಗೂ ತಂತ್ರಜ್ಞಾನದ ತರಬೇತಿ ಹೊಂದಿವರಾಗಲಿದ್ದಾರೆ. ಈಗಾಗಲೇ ಸ್ಟೇಷನ್‌ನಗಳನ್ನು ಆಧುನೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರಿಗೆ ಕಂಪ್ಯೂಟರ್, ಸೈಬರ್ ಮಾಹಿತಿ, ಶಸ್ತ್ರಾಸ್ತ್ರ ಜ್ಞಾನವನ್ನು ನೀಡಲಾಗುತ್ತಿದೆ. ಪೊಲೀಸ್ ಇಲಾಖೆಗೆ ನೇಮಕಾತಿಗೂ ಡಬಲ್ ಗ್ರಾಜೆಯೆಟ್ಸ್, ಬಿಇ, ಎಂಬಿಎ ಪದವೀಧರರು ಬರುತ್ತಿದ್ದಾರೆ. 100 ಪೊಲೀಸ್ ಠಾಣೆಗಳ ನಿರ್ಮಾಣ ಯೋಜನೆ ಕಾರ್ಯಗತವಾಗುತ್ತಿದೆ. ಇದೇ ವೇಳೆ
ತರಬೇತಿ ಪಠ್ಯಕ್ರಮ ಆಧುನೀಕರಣಗೊಳಿಸುವ ಜತೆಗೆ ಹೆಚ್ಚುವರಿ ಪಠ್ಯಕ್ರಮದ ಮೂಲಕ ಅತ್ಯಂತ ಜ್ಞಾನದಿಂದ ಕೂಡಿದ ಆಧುನಿಕ ಪೊಲೀಸರನ್ನು ಇಲಾಖೆ ಹೊಂದಲಿದೆ ಎಂದುಗೃಹ ಸಚಿವರು ಹೇಳಿದರು.
ಐದು ವರ್ಷದೊಳಗೆ ಶೇ. 70ರಷ್ಟು ವಸತಿಯೋಜನೆ
ಈ ಹಿಂದಿನ ತಮ್ಮ ಸರಕಾರದ ಅವಧಿಯಲ್ಲಿ ಪೊಲೀಸರಿಗೆ ಗೃಹಭಾಗ್ಯದ ಅವಕಾಶ ಆರಂಭಿಸಲಾಗಿತ್ತು. ಶೇ. 40ರಷ್ಟು ಸಿಬ್ಬಂದಿಗೆ ಹೊಸ ಮನೆ ಕಟ್ಟಿಕೊಟ್ಟಿದೇವೆ. 2 ಬೆಡ್‌ರೂಂಗಳ ಅಪಾರ್ಟ್‌ಮೆಂಟ್ ಮಾದರಿಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಸರಕಾರದ ಅವಧಿ ಪೂರ್ಣಗೊಳ್ಳುವುದರೊಳಗೆ ಶೇ. 70 ಸಿಬ್ಬಂದಿಗೆ ಗೃಹ ಭಾಗ್ಯ ಒದಗಿಸುವುದು ನಮ್ಮ ಉದ್ದೇಶ ಎಂದರು.
ನಾಲ್ಕು ತಿಂಗಳೊಳಗೆ ಕಮಾಂಡ್ ಸೆಂಟರ್ ಕಾರ್ಯಗತ
ಪೊಲೀಸರು ಸಾರ್ವಜನಿಕರ ಜತೆ ಸಂಯಮದಿಂದ ವರ್ತಿಸುವುದು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಠಾಣೆಗೆ ಬರುವ ಮುಖ್ಯವಾಗಿ ಮಹಿಳೆಯರು ಯಾವುದೇ ಆತಂಕ, ಭಯ ಇಲ್ಲದೆ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಸಹಕಾರಿಯಾಗುವಂತೆ ರಿಸೆಪ್ಷನ್ ಕೌಂಟರ್ ತೆರೆಯುವ ಜತೆಗೆ ಸಂಪೂರ್ಣವಾಗಿ ಠಾಣೆಗಳ ಮೇಲೆ ನಿಗಾ ಇರಿಸುವ ಕೇಂದ್ರೀಕೃತ ಕಮಾಂಡ್ ಸೆಂಟರ್ ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಾರ್ಯಗತವಾಗಲಿದೆ. ಈ ಮೂಲಕ ಇದು ದೇಶದಲ್ಲೇ ಮೊದಲ ಕ್ರಮವಾಗಲಿದ್ದು, ಠಾಣೆಯಲ್ಲಿನ ಪ್ರತಿ ಆಗುಹೋಗುಗಳು ಬೆಂಗಳೂರಿನ ಕಮಾಂಡ್ ಸೆಂಟರ್‌ಗೆ ಲಭ್ಯವಾಗಿ ತಕ್ಷಣ ಕ್ರಮಕ್ಕೆ ಸಹಕಾರಿಯಾಗಲಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಖಾಲಿ ಹುದ್ದೆ ಹಂತಹಂತವಾಗಿ ಭರ್ತಿ
ಇಲಾಖೆಯಲ್ಲಿ 18000 ಹುದ್ದೆಗಳು ಖಾಲಿ ಇದ್ದು ಕಾನ್‌ಸ್ಟೆಬಲ್ ಹುದ್ದೆಗಳನ್ನು ಹಂತಹಂತವಾಗಿ ನೇಮಕಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಸ್ ಐ ಹುದ್ದೆಗಳೂ ಖಾಲಿ ಇದ್ದು, ಪಿಎಸ್‌ಐ ಹಗರಣ ನ್ಯಾಯಾಲದಲ್ಲಿರುವುದರಿಂದ ಆದೇಶದಂತೆ ಕ್ರಮ ವಹಿಸಲಾಗುತ್ತದೆ. ಅದು ಸೇರಿ ಒಟ್ಟು 1000 ಎಸಂಐ ಹುದೆ ಹುದ್ದೆ ಶೀಘ್ರ ಭರ್ತಿಮಾಡಲಾಗುವುದು ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿಗಳಾದ ದಿನೇಶ್ ಕುಮಾರ್, ಸಿದ್ದಾರ್ಥ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು.
ಅನೈತಿಕ ಪೊಲೀಸ್‌ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ
ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಬಹಳ ಸಂಯಮದಿಂದ ವರ್ತಿಸಬೇಕಿದೆ. ಪ್ರತ್ಯೇಕ ತಂಡ ರಚನೆಯಾದ ಬಳಿಕ ಬಹಳಷ್ಟು ನಿಯಂತ್ರಣದಲ್ಲಿದೆ. ಇಂತಹ ಕೃತ್ಯಗಳನ್ನು ನಡೆಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮವನ್ನು ಹಿಂದಿನ ಹಾಗೂ ಈಗಿನ ಪೊಲೀಸ್ ಆಯುಕ್ತರು ಕೈಗೊಳ್ಳುತ್ತಿದ್ದಾರೆ.
ಪಕ್ಷದ ಪ್ರಣಾಳಿಕೆಯಲ್ಲಿಯೇ ಸರ್ವಜನಾಂಗದ ಶಾಂತಿಯ ತೋಟ ಎಂಬ ಘೋಷಣೆಯಂತೆ ಯಾವುದೇ ರೀತಿಯ ಪ್ರಚೋದನೆಗೆ ಅವಕಾಶವಿಲ್ಲ ಎಂದು ಗೃಹ ಸಚಿವರು ಹೇಳಿದರು.
ಇತ್ತೀಚೆಗೆ ಮಂಗಳಾದೇವಿ ಸಂತೆಗೆ ಸಂಬಂಧಿಸಿ ಪ್ರಕರಣವನ್ನು ನಿಭಾಯಿಸುವಲ್ಲಿ ಸರಕಾರ ಹಿಂದೇಟು ಹಾಕಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಲು ಪ್ರಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಮೇಲೆ ನಿಗಾ ಇರಿಸಲಾಗಿದೆ ಎಂದರು.
ನ.1ರಂದು ಡ್ರಗ್ಸ್ ವಿರುದ್ಧ ಮ್ಯಾರಥಾನ್
ಡ್ರಗ್ಸ್ ವಿರುದ್ಧದ ಅಭಿಯಾನ ಮುಂದುವರಿದಿದ್ದು, ನ. 1ರಂದು ಮ್ಯಾರಥಾನ್ ಆಯೋಜಿಸಲಾಗಿದೆ. ಇದರಲ್ಲಿ 5000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡ್ರಗ್ಸ್‌ಗೆ ಸಂಬಂಧಿಸಿ ಕಳೆದ ಮೂರು ತಿಂಗಳಿನಿಂದೀಚೆದೆ 72 ಪ್ರಕರಣಗಳಲ್ಲಿ 113 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 19 ಮಂದಿ ಪ್ರಮುಖ ಡ್ರಗ್ಸ್ ಪೂರೈಕೆದಾರರಾಗಿದ್ದರೆ, 94 ಮಂದಿ ಡ್ರಗ್ಸ್ ಸೇವಿಸಿದವರಾಗಿದ್ದಾರೆ. ಸುಮಾರು 90 ಲಕ್ಷ ರೂ. ವೌಲ್ಯದ ಮಾದಕ ವಸ್ತುಗಳನ್ನು ಈ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದರು.