ರಾಜ್ಯದ ಹಿತರಕ್ಷಣೆಗಾಗಿ ಜೆಡಿಎಸ್ -ಬಿಜೆಪಿ ಮೈತ್ರಿ: ಎಚ್.ಡಿ. ಕುಮಾರಸ್ವಾಮಿ
ಹಾಸನ: ಸೆ, 13: ʻಕಾಂಗ್ರೆಸ್ ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಮತ್ತು ನಾಡಿನ ಹಿತರಕ್ಷಣೆಗಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28 ಕ್ಕೆ 28 ಸೀಟು ಮೈತ್ರಿ ಪಕ್ಷ ಗೆಲ್ಲಲಿದೆʻ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀ ಆದಿಚುಂಚನಗಿರಿ ಇಂಗ್ಲಿಷ್ ಹೈಸ್ಕೂಲ್ ಮೈದಾನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʻದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊದಲು ವೀರಪ್ಪ ಮೊಯ್ಲಿ ಬಿಡಲಿ. ದೇವೇಗೌಡರು ಕಾನೂನು ಚೌಕಟ್ಟನ್ನು ಪಾಲಿಸಿ ಕಾವೇರಿ ನದಿ ನೀರು ಉಳಿಸಲು ಹೋರಾಟ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಮಹಾನ್ ಸುಳ್ಳುಗಾರ. ಸುಳ್ಳು ಹೇಳಿಕೊಂಡು ತಿರುಗುವ ಬದಲು ಕಾವೇರಿ ನದಿ ನೀರಾವರಿ ವೇದಿಕೆಯಲ್ಲಿ ಮಾತನಾಡಲಿʻ ಎಂದು ತಿರುಗೇಟು ನೀಡಿದರು.
ʻಜೆಡಿಎಸ್ - ಬಿಜೆಪಿ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲೇ ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತೇವೆ. ಸಿದ್ದರಾಮಯ್ಯ 2004 ರಲ್ಲಿ ನಾನು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಯಾವ್ಯಾವ ಬಿಜೆಪಿ ನಾಯಕನ ಸಂಪರ್ಕ ಮಾಡಿದರಲ್ಲಾ ಅದೆಲ್ಲಾ ಗೊತ್ತಿದೆ. ಸಿದ್ದರಾಮಯ್ಯ, ಮಹದೇವಪ್ಪ, ಸತೀಶ್ ಜಾರಕಿಹೋಳಿ, ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಲು ಹೋಗಿದ್ದವರು ಈಗ ಸಿದ್ದಾಂತ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರ ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಾರೆ ಎಂದರು. ನೀರಾವರಿ ಸಚಿವರು ಎತ್ತಿನಹೋಳೆ ನೊಡಲು ಬಂದಿದ್ದಾರಾ ಅಥವಾ ಈ ಭಾಗದ ಕಾಫಿ ತೋಟ ನೋಡಲು ಬಂದಿದ್ದರೋ ಗೊತ್ತಿಲ್ಲʻ ಎಂದು ಟೀಕಿಸದರು.
ʻʻನನ್ನ ಆರೋಗ್ಯದ ಸಮಸ್ಯೆ ನಂತರ ನಮ್ಮ ಪಕ್ಷದ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಭಾಗವಹಿಸಿದ್ದೆನೆ. ರಾಜ್ಯದ ಕೃಷಿಯಲ್ಲಿರುವ ರೈತರು ಬರಗಾಲ ಸಮಸ್ಯೆಯಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಬರಗಾಲ ಪೀಡಿತ ಪ್ರದೇಶಗಳ ಘೋಷಣೆ ಮಾಡಲು ಮೀನಾಮೇಶ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಾಲಹರಣ ಮಾಡುತ್ತಿದ್ದಾರೆ. ರೈತರು ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ನಾಶವಾಗಿ ಬರಗಾಲದಿಂದ ರೈತರು ತಮ್ಮ ಬೆಳೆ ನಾಶವಾಗಿರುವ ದೃಶ್ಯ ಕಾಣುತ್ತಿದೆ. ಸರ್ಕಾರ ರಾಜ್ಯದ ನೆಲ, ಜಲ, ರಕ್ಷಣೆ ಮಾಡುವಲ್ಲಿ ವಿಫಲವಾಗಿದೆʻʻ ಎಂದು ಅವರು ಕಿಡಿಕಾರಿದರು.