ಜೆಡಿಎಸ್​, ಬಿಜೆಪಿ ಒಟ್ಟಾಗಿ ಹೋರಾಟ: ಎಚ್.ಡಿ ಕುಮಾರಸ್ವಾಮಿ

ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಸಹ ವಿರೋಧ ಪಕ್ಷ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Update: 2023-07-21 13:40 GMT

ಬೆಂಗಳೂರು: 'ರಾಜ್ಯ ಕಾಂಗ್ರೆಸ್ ಸರಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಜೆಡಿಎಸ್​, ಬಿಜೆಪಿ ಒಟ್ಟಾಗಿ ಹೋರಾಟ ನಡೆಸಲಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ. 

ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಚ್.‌ಡಿ.ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

''ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಸಹ ವಿರೋಧ ಪಕ್ಷ. ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ'' ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. 

''ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ಸಂದೇಶ ನೀಡಿದ್ದಾರೆ. ನಮಗೆ ದೇವೇಗೌಡರು ಸಲಹೆ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ'' ಇದೇ ವೇಳೆ ಹೇಳಿದರು.

‘ನೈಸ್ ಸಂಸ್ಥೆ’ಗೆ ನಿಡಿರುವ ಹೆಚ್ಚುವರಿ ಭೂಮಿ ಹಿಂಪಡೆಯುವಂತೆ ಒತ್ತಾಯ  

ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ‘ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ’(ನೈಸ್ ಯೋಜನೆ)ಯನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು. 

‘ನೈಸ್ ಯೋಜನೆಯನ್ನು ಯಾವ ಮುಲಾಜು ಇಲ್ಲದೆ ಸರಕಾರದ ವಶಕ್ಕೆ ಪಡೆಯಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಮಂಡಲದ ಜಂಟಿ ಸದನ ಸಮಿತಿ ವರದಿಯ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಆ ಇಡೀ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಒಂದು ವೇಳೆ ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸದನದ ಒಳಗೆ-ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದು ಇಬ್ಬರೂ ನಾಯಕರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ನೈಸ್ ರಸ್ತೆಯ ಅಕ್ರಮ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಬಸವರಾಜ ಬೊಮ್ಮಾಯಿ ಸರಕಾರ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳು ಕೈಗೊಂಡಿದ್ದರಿಂದ ನ್ಯಾಯಾಲಯಗಳಲ್ಲಿ ನೈಸ್ ವಿರುದ್ಧ, ಸರಕಾರದ ಪರವಾಗಿ ಅನೇಕ ಆದೇಶಗಳು ಬಂದಿವೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವು. ಮೊದಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದೆವು. ಬಳಿಕ ಅದನ್ನು ನಿಯಮ 69ಕ್ಕೆ ಬದಲಿಸಿ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದರು. ಆದರೂ ಅವಕಾಶ ಸಿಗಲಿಲ್ಲ. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಸೇರಿ ಈ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಡುತ್ತೇವೆ. ಸರಕಾರ ಸದನ ಸಮಿತಿ ವರದಿ ಇಟ್ಟುಕೊಂಡು ಸುಮ್ಮನಿದ್ದರೆ ಯಾರಿಗೆ ಲಾಭ? ಈ ಯೋಜನೆಯನ್ನೂ ನಿಲ್ಲಿಸಿದರೆ 30 ಸಾವಿರ ಕೋಟಿ ರೂ.ಹಣ ಸಿಗುತ್ತದೆ. ಭಾಗ್ಯಗಳಿಗೆ ಅದನ್ನು ಬಳಸಿ ಎಂದು ಕುಮಾರಸ್ವಾಮಿ ತಿಳಿಸಿದರು.

ಈಗ ಬ್ರ್ಯಾಂಡ್ ಬೆಂಗಳೂರು ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್‍ನೊಳಕ್ಕೆ ನೈಸಾಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೆ ಅಧಿಕಾರದಲ್ಲಿ ಇದ್ದಾರೆ. ಅದಕ್ಕೆ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾವ ಮಾಡಿದ್ದೇವೆ. ಅಲ್ಲದೆ, ನೈಸ್ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಅವರು ಹೇಳಿದರು.

2012ರೊಳಗೆ ಕಾಂಕ್ರೀಟ್ ರಸ್ತೆ ಮಾಡದೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎನ್ನುವ ಷರತ್ತು ಯೋಜನೆಯಲ್ಲಿ ಇದೆ. ಆದರೆ, ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗಿದೆ. ಈವರೆಗೂ ವಸೂಲು ಮಾಡಲಾಗಿರುವ 1325 ಕೋಟಿ ರೂಪಾಯಿ ಟೋಲ್ ಹಣವನ್ನು ಸರಕಾರ ವಾಪಸ್ ಪಡೆಯಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರಕಾರ ಕೂಡಲೇ ಹಣ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಈ ಯೋಜನೆ ಬಗ್ಗೆ ಮಾತನಾಡಲೇಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ, ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ 5 ಲಕ್ಷ ರೂ.ದಂಡ ಹಾಕಿದ್ದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಸರಕಾರ ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ನ್ಯಾಯಾಲಯ ಆ ಕಂಪೆನಿಗೆ ಛೀಮಾರಿ ಹಾಕಿದೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ನೈಸ್ ಅಕ್ರಮ ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಅಕ್ರಮ. ಇದರ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ದನಿ ಎತ್ತಿದ್ದಾರೆ. ಅದರ ಅಕ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಸರಕಾರ ಮೀನಾಮೇಷ ಎಣಿಸದೆ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಇಡೀ ಯೋಜನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಈ ರಸ್ತೆ ಕಾಮಗಾರಿಗೆ ಹೆಚ್ಚುವರಿ ಸಾಕಷ್ಟು ಭೂಮಿಯನ್ನೂ ಪಡೆದುಕೊಳ್ಳಲಾಗಿದೆ. ಈ ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮತ್ತೆ ಹೊಸದಾಗಿ ಜಮೀನು ಸ್ವಾಧೀನಕ್ಕೆ ಪಡೆಯುವ ಹುನ್ನಾರವನ್ನು ನೈಸ್ ಕಂಪೆನಿ ನಡೆಸಿದೆ’ ಎಂದು ದೂರಿದರು.

ಮುಖ್ಯವಾಗಿ ನೈಸ್ ಯೋಜನೆಗೆ ನೀಡಲಾಗಿರುವ ಹೆಚ್ಚುವರಿ ಭೂಮಿಯನ್ನು ಕಾನೂನು ಪ್ರಕಾರವೇ ಹಿಂಪಡೆಯಲು ಸಂಪುಟ ಉಪ ಸಮಿತಿ ಕೂಡ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಈಗಿನ ರಾಜ್ಯ ಸರಕಾರ ನೈಸ್ ಯೋಜನೆಯಿಂದ ಹೆಚ್ಚುವರಿ ಭೂಮಿಯನ್ನು ಈ ಕೂಡಲೇ ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹೆಚ್ಚುವರಿ ಜಮೀನು ಅಂತಿಮವಾಗಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಆಗುತ್ತಿದೆ. ಸರಕಾರ ಅದನ್ನು ತಡೆದು ವಶಕ್ಕೆ ಪಡೆಯಬೇಕು. ಈಗಾಗಲೇ ಬೆಂಗಳೂರು ಮೈಸೂರು ನಡುವೆ ಸುಸಜ್ಜಿತ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆ ಅಗತ್ಯ ಇಲ್ಲ. ಟೋಲ್ ಕೂಡ ಹೆಚ್ಚುವರಿಯಾಗಿ ಸಂಗ್ರಹ ಆಗಿದ್ದು, ಅದರ ಲೆಕ್ಕಪರಿಶೋಧನೆ ನಡೆಸಿ ಹಣವನ್ನು ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠೀಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯನಾಯ್ಕ್, ಶಾಸಕರಾದ ನೇಮಿರಾಜ್ ನಾಯಕ್, ರಾಜೂಗೌಡ, ಕರೆಮ್ಮ ನಾಯಕ್, ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News