‘ಲೈಂಗಿಕ ಕಿರುಕುಳ ತಡೆ’ಗೆ ಸಮಿತಿ ರಚನೆ | ಕಾಲಾವಕಾಶ ಕೋರಿದ ಚಲನಚಿತ್ರ ವಾಣಿಜ್ಯ ಮಂಡಳಿ

Update: 2024-10-06 16:09 GMT

ಬೆಂಗಳೂರು : ಲೈಂಗಿಕ ಕಿರುಕುಳ ತಡೆ ಕಾಯ್ದೆಗೆ ಅನುಗುಣವಾಗಿ ಚಿತ್ರೋದ್ಯಮದಲ್ಲಿ ಆಂತರಿಕ ಸಮಿತಿ ಸ್ಥಾಪಿಸಬೇಕೆಂಬ ಮಹಿಳಾ ಆಯೋಗದ ಬೇಡಿಕೆಗೆ ಪ್ರತಿಕ್ರಿಯಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‍ಸಿಸಿ)ಯು 15 ದಿನಗಳ ಕಾಲಾವಕಾಶ ಕೋರಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ರವಿವಾರ ಈ ಕುರಿತು ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸೆ.16ರಂದು ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸುವ ಕ್ರಿಯಾ ಯೋಜನೆ ರೂಪಿಸಲು ಯಾಕೆ ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಕಾರಣ ನೀಡಲು ಕೆಎಫ್‍ಸಿಸಿಗೆ 15ದಿನಗಳ ಗಡುವು ನೀಡಲಾಗಿತ್ತು. ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ, ಮಹಿಳಾ ಆಯೋಗವು ಸೆ.18ರಂದು ಕೆಎಫ್‍ಸಿಸಿಗೆ ಪತ್ರವನ್ನು ಕಳುಹಿಸಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ, ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ವಿವರವಾದ ಮಾಹಿತಿಯನ್ನು ಕೋರಲಾಗಿತ್ತು ಎಂದು ಅವರು ಹೇಳಿದರು.

ಕೆಎಫ್‍ಸಿಸಿ ಕಾಲಾವಕಾಶ ಕೇಳಿರುವ ಬಗ್ಗೆ ನಾವು ಸರಿ ಎಂದು ಒಪ್ಪಿಗೆ ಸೂಚಿಸಿದ್ದೇವೆ. ಕಾಲಾವಕಾಶದ ನಂತರ ನಾವು ಕೇಳಿರುವ ಪ್ರತಿಯೊಂದು ಅಂಶಗಳನ್ನು ಉಲ್ಲೇಖಿಸಿ ಅವರು ಉತ್ತರಿಸಬೇಕಾಗಿದೆ. ಅಲ್ಲಿ ಅವರದೇ ಆದ ಬೈಲಾಗಳನ್ನು ಅವರು ಹೊಂದಿದ್ದಾರೆ. ಸಮಿತಿ ರಚಿಸಲು ಅಲ್ಲಿ ಪರ ಇರುವರು ಕಡಿಮೆ. ವಿರುದ್ಧ ಇರುವರು ಹೆಚ್ಚು, ಅವರು ಏನು ಮಾಡುತ್ತಾರೋ ಗೊತ್ತಿಲ್ಲ. 15 ದಿನದ ನಂತರ ಸಿಎಂ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ನಾಗಲಕ್ಷ್ಮೀ ಚೌದರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News