ಬಿಜೆಪಿ ಪಾದಯಾತ್ರೆಯಲ್ಲಿ ನಾವು ಭಾಗವಹಿಸುತ್ತೇವೆ: ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ
ಮೈಸೂರು: ಬಿಜೆಪಿ ನಾಯಕರು ನಮ್ಮ ನಾಯಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವೊಲಿಸಿರುವುದರಿಂದ ಬಿಜೆಪಿ ಪಾದಯಾತ್ರೆಯಲ್ಲಿ ನಾವು ಭಾಗವಹಿಸುತ್ತೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಆಗಿ ಜನ ಬಿತ್ತನೆಯಲ್ಲಿ ತೊಡಗಿರುತ್ತಾರೆ. ಜೊತೆಗೆ ಗುಡ್ಡ ಕುಸಿತ, ನೆರೆಹಾವಳಿಯಿಂದ ರಾಜ್ಯದ ಜನ ಸಂಕಷ್ಟಕ್ಕೊಳಗಾಗಿರುವುದರಿಂದ ಪಾದಯಾತ್ರೆ ಮುಂದೂಡುವಂತೆ ನಾವು ಬಿಜೆಪಿ ನಾಯಕರಿಗೆ ತಿಳಿಸಿದ್ದೆವು. ಆದರೆ ಗುರುವಾರ ದಿಲ್ಲಿಯಲ್ಲಿ ನಮ್ಮ ನಾಯಕರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಅವರು ಭೇಟಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವೊಲಿಸಿದ್ದಾರೆ. ಹಾಗಾಗಿ ನಮ್ಮ ನಾಯಕರ ಸೂಚನೆ ಮೇರೆಗೆ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿರುವ ರಾಜ್ಯಪಾಲರ ಕ್ರಮದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಜಿ.ಟಿ.ದೇವೇಗೌಡ, ರಾಜ್ಯಪಾಲರು ನೋಟಿಸ್ ನೀಡಿರುವ ಬಗ್ಗೆ ಕಾನೂನಾತ್ಮಕವಾಗಿ ನನಗೆ ಅಷ್ಟೊಂದು ಗೊತ್ತಿಲ್ಲ. ಇದರ ಬಗ್ಗೆ ಕಾನೂನಿದೆ, ನ್ಯಾಯಾಲಯ ಇದೆ. ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಅಧ್ಯಕ್ಷರು ಸಚಿವರುಗಳು ಖಂಡನೆ ವ್ಯಕ್ತಪಡಿಸಿದ್ದಾರೆ. ನೋಟಿಸ್ ಹಿಂಪಡೆಯಬೇಕು ಎಂದು ಸಚಿವ ಸಂಪುಟ ಸಭೆ ತೀರ್ಮಾನವನ್ನು ಮಾಡಿದ್ದಾರೆ. ಇದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನೋಡೋಣ ಎಂದು ಹೇಳಿದರು.