ಹಾಸನದಲ್ಲಿ ಜೆಡಿಎಸ್‌ ಒಗ್ಗಟ್ಟಿನ ಮಂತ್ರ: 18 ಶಾಸಕರು ಹಾಜರ್- ಓರ್ವ ಗೈರು

Update: 2023-11-09 06:32 GMT

ಜೆಡಿಎಸ್ ಶಾಸಕರೊಂದಿಗೆ ಕುಮಾರಸ್ವಾಮಿ 

ಬೆಂಗಳೂರು: ಹಾಸನದಲ್ಲಿ ಜೆಡಿಎಸ್ ಶಾಸಕರ ಮಹತ್ವದ ಸಭೆಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. 

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಾಸನ ನಗರದ ರೆಸಾರ್ಟ್‌ನಲ್ಲಿ ನಡೆದ ಸರಣಿ ಸಭೆಗಳಲ್ಲಿ ಗುರುಮಠಕಲ್‌  ಶಾಸಕ ಶರಣಗೌಡ ಕಂದಕೂರು ಹೊರತುಪಡಿಸಿ, ಉಳಿದೆಲ್ಲ 18 ಶಾಸಕರು ಭಾಗವಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶರಣಗೌಡ ಕಂದಕೂರು, ''ಬಿಜೆಪಿ ಜತೆ ಕೈಜೋಡಿಸುವ ಪಕ್ಷದ ತೀರ್ಮಾನದ ಬಗ್ಗೆ ಖಂಡಿತವಾಗಿ ಅಸಮಾಧಾನವಿದೆ. ಹಾಸನದಲ್ಲಿ ಬುಧವಾರ ನಡೆದ ಪಕ್ಷದ ಸಭೆಗೆ ಆಹ್ವಾನವಿತ್ತು, ಆದರೆ ನಾನು ಸಭೆಗೆ ಹೋಗಲಿಲ್ಲ'' ಎಂದು ಹೇಳಿದ್ದಾರೆ. 

'ನಾನು ಸಭೆಗೆ ಗೈರಾಗುವ ವಿಚಾರವನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಂದಿಲ್ಲ. ಈ ಹಿಂದೆಯೂ ಪಕ್ಷದ ಹಲವು ಸಭೆಗಳಿಗೆ ಹಾಜರಾಗಿರಲಿಲ್ಲ' ಎಂದು ಅವರು ತಿಳಿಸಿದ್ದಾರೆ. 

- ಶರಣಗೌಡ ಕಂದಕೂರು

''ಕಾಂಗ್ರೆಸ್‌ನವರು ನನ್ನನ್ನು ಸಂಪರ್ಕ ಮಾಡಿಲ್ಲ''

ಕಾಂಗ್ರೆಸ್ ಸೇರ್ಪಡೆಯಾಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನಗೆ ಪ್ರತಿಕ್ರಿಯಿಸಿದ ಶರಣಗೌಡ,  'ಕಾಂಗ್ರೆಸ್‌ನವರು ನನ್ನನ್ನು ಸಂಪರ್ಕ ಮಾಡಿಲ್ಲ. ಅವರ ಬಳಿ 135 ಶಾಸಕರು ಇದ್ದಾರೆ. ನನ್ನ ಅವಶ್ಯ ಅವರಿಗೆ ಇಲ್ಲ. ಶಾಸಕನಾಗಿ ಮುಖ್ಯಮಂತ್ರಿ ಮತ್ತು ಇತರ ನಾಯಕರ ಜತೆ ಅಭಿವೃದ್ಧಿ ಕುರಿತು ಮಾತನಾಡಿದ್ದೇನೆ' ಎಂದು ಹೇಳಿದ್ದಾರೆ.

ಇನ್ನು ಕಳೆದ ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ನಡೆಸಿದ್ದ ಸಭೆಗೂ ಶಾಸಕ ಶರಣಗೌಡ ಕಂದಕೂರು ಗೈರಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News