ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ | ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ನಿಂದ ಜಾಮೀನು
ಬೆಂಗಳೂರು : ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ವಾಸುದೇವ್ ಭಗವಾನ್ ಸೂರ್ಯವಂಶಿ ಮತ್ತು ಅಮಿತ್ ಬಡ್ಡಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಕಲಬುರ್ಗಿ ಅವರ ಕೊಲೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಈ ಸಂಬಂಧ ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರವಿದೆ. ಈ ಸಂಬಂಧ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಅವರ ಪ್ರಕರಣದಲ್ಲಿ 138 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರಕಾರದ ಪರ ವಕೀಲರು, ಇಬ್ಬರೂ ಆರೋಪಿಗಳ ವಿರುದ್ಧ ಗಂಭೀರ ಆರೋಪವಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ಇಬ್ಬರ ವಿಚಾರಣೆಗೆ ಅಡ್ಡಿಯಾಗಲಿದೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಇವೆ. ಇದೊಂದು ಅತ್ಯಂತ ಹೀನಾಯ ಕೃತ್ಯವಾಗಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ವಿಚಾರಣೆಗೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.