ಕರ್ನಾಟಕ ಬಜೆಟ್ 2023 LIVE |ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ನಿರ್ಧಾರ
ಬಜೆಟ್ ಬ್ರೀಫ್ ಕೇಸ್ ಹಸ್ತಾಂತರ
ಬಜೆಟ್ ಬ್ರೀಫ್ ಕೇಸ್ ಹಸ್ತಾಂತರ
ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅವರು ಬಜೆಟ್ ಪುಸ್ತಕಗಳಿರುವ ಬ್ರೀಫ್ ಕೇಸನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ಹಣಕಾಸು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಟ್ವೀಟ್
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ ಎಂದು ಹಣಕಾಸು ಖಾತೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕೋರಿದ್ದಾರೆ. ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವೆ ಎಂದು ಸಿದ್ದರಾಮಯ್ಯ ವಾಗ್ದಾನ ನೀಡಿದ್ದಾರೆ.
ವಿರೋಧ ಪಕ್ಷಗಳ ಸಲಹೆಗಳನ್ನು ಸ್ವೀಕರಿಸುತ್ತೇವೆ: ಡಿಸಿಎಂ ಡಿ.ಕೆ ಶಿವಕುಮಾರ್
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾಡಿನ ಜನತೆಗೆ ಕೊಟ್ಟ ಮಾತನ್ನ ಉಳಿಸಿಕೊಳ್ತೇವೆ. ಕೊಟ್ಟ ಮಾತಿನಂತೆ ನಡೆಯುತ್ತೇವೆ. ವಿರೋಧ ಪಕ್ಷಗಳ ಸಲಹೆಗಳನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.
ಕರ್ನಾಟಕ ಬಜೆಟ್ 2023 | ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ 14ನೇ ಬಜೆಟ್ ಅನ್ನು ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್ಪಿ ಸಭೆ ಆರಂಭವಾಗಿದ್ದು, ಬಜೆಟ್ ಹಾಗೂ ಸದನದಲ್ಲಿ ಹೇಗೆಲ್ಲ ಮಾತನಾಡಬೇಕು ಎನ್ನುವುದರ ಬಗ್ಗೆ ಶಾಸಕರು, ಸಚಿವರಿಗೆ ಸಿಎಂ ಸಲಹೆ ನೀಡುತ್ತಿದ್ದಾರೆ.
ಇನ್ನು ಸಿಎಂ ಸಿದ್ದರಾಯ್ಯ ಮಹತ್ವದ ಐದು ಗ್ಯಾರಂಟಿಗಳಿಗೆ ಯಾವ ರೀತಿ ಹಣ ಹೊಂದಾಣಿಕೆ ಮಾಡಲಿದ್ದಾರೆ ಎಂಬ ಕುತೂಹಲ ಸೃಷ್ಟಿಸಿದೆ.