ದೇವಸ್ಥಾನ ಉದ್ಘಾಟನೆಯ ಅಬ್ಬರ ಯಾಕೆ? ಯುವಜನರಿಗೆ ನಿರುದ್ಯೋಗವನ್ನು ಖಾಯಂ ಮಾಡಿದ್ದಕ್ಕಾ?: ಸಿದ್ದರಾಮಯ್ಯ ಪ್ರಶ್ನೆ
ಶಿವಮೊಗ್ಗ: ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ "ಯುವನಿಧಿ" ಯೋಜನೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರ ಸಂಪೂರ್ಣ ಭಾಷಣ ಇಲ್ಲಿದೆ:
ರಾಜ್ಯದ ಸಮಸ್ತ ಬಂಧುಗಳಿಗೂ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು. ಸ್ವಾಮಿ ವಿವೇಕಾನಂದರು 12-1-1863 ರಲ್ಲಿ ಹುಟ್ಟಿದ್ದರು. ವೈಜ್ಞಾನಿಕತೆ, ವೈಚಾರಿಕತೆ, ಆಧ್ಯಾತ್ಮ ಮುಂತಾದವುಗಳನ್ನು ಪ್ರಖರವಾಗಿ ಪ್ರತಿಪಾದಿಸಿದ ಹಾಗೂ ಪುರೋಹಿತಶಾಹಿಯ ದಬ್ಬಾಳಿಕೆ, ಜಾತಿ, ವರ್ಣಾಶ್ರಮ ಧರ್ಮವನ್ನು ವಿರೋಧಿಸಿದ ಮಹಾನ್ ಮಾನವತಾವಾದಿ ಹಾಗೂ ಶೂದ್ರವಾದಿ ದಾರ್ಶನಿಕ ವಿವೇಕಾನಂದರು ಹುಟ್ಟಿದ ದಿನದಂದೆ ನಾವು ಯುವನಿಧಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇವೆ.
ಸ್ವಾಮಿ ವಿವೇಕಾನಂದರು ಹುಟ್ಟಿದ ದಿನವನ್ನು ರಾಜೀವ್ ಗಾಂಧಿಯವರು 1984 ರಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಘೋಷಿಸಿದರು. 1985 ರ ಜನವರಿ 12 ರಂದು ಪ್ರಥಮ ಬಾರಿಗೆ ಆಚರಣೆಯನ್ನೂ ಮಾಡಿದರು. ಯುವಜನರಿಗೆ ಹೊಸ ಲೋಕಗಳನ್ನೆ ಸೃಷ್ಟಿಸಿದ ರಾಜೀವ್ ಗಾಂಧಿಯವರನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಮತದಾನದ ವಯಸ್ಸು ಇಳಿಸಿದರು, ಇಂದು ಜಗತ್ತಿನಲ್ಲಿ ಸಿಂಹ ಪಾಲು ಪಡೆದಿರುವ ಐಟಿ ಉದ್ಯಮವನ್ನು ಸ್ಥಾಪಿಸಿದರು. ಪಂಚಾಯತ್ ರಾಜ್ ವ್ಯವಸ್ಥೆ ತಂದರು. ರೈಲ್ವೆ ಟಿಕೆಟುಗಳನ್ನು ಕಾಯ್ದಿರಿಸಲು ಕಂಪ್ಯೂಟರೀಕರಣ ವ್ಯವಸ್ಥೆ ಪ್ರಾರಂಭಿಸಿದರು. ಆಧುನಿಕ ಯುಗಕ್ಕೆ ಅಗತ್ಯವಿರುವ ಶಿಕ್ಷಣ ನೀತಿಯನ್ನು ತಂದರು. ಯುವ ಶಕ್ತಿಯೆ ದೇಶದ ಸಂಪತ್ತು ಎಂದು ಭಾವಿಸಿ ಕೆಲಸ ಮಾಡಿದ್ದರು. ಅವರಿಗೆ ಸ್ವಾಮಿ ವಿವೇಕಾನಂದರು ಸ್ಪೂರ್ತಿಯಾಗಿದ್ದರು.
ಇಂದು ದೇಶದಲ್ಲಿ ವಿಚಿತ್ರ ವಿದ್ಯಮಾನಗಳು ನಡೆಯುತ್ತಿವೆ. ಸ್ವಾಮಿ ವಿವೇಕಾನಂದರು ಸ್ವತಃ ಸಂತರಾಗಿದ್ದರೂ, ಸನ್ಯಾಸಿಯಾಗಿದ್ದರೂ ಸಹ ಅವರು ವಿಜ್ಞಾನದ ಪರವಾಗಿದ್ದರು. ಜಮ್ ಶೆಡ್ ಜಿ ಟಾಟಾ ಅವರೆ ಬರೆದುಕೊಂಡಿರುವಂತೆ, ಟಾಟಾ ಅವರು ಸ್ವಾಮಿ ವಿವೇಕಾನಂದರು 1893 ರಲ್ಲಿ ವ್ಯಾಂಕೋವರ್ ನಲ್ಲಿ ಭೇಟಿಯಾಗಿದ್ದರಂತೆ. ಆಗ ಅವರ ಮಾತುಗಳಿಂದ ಪ್ರೇರಿತರಾಗಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ತೀರ್ಮಾನಕ್ಕೆ ಬಂದರಂತೆ. ಐಐಎಸ್ಸಿ ಈಗ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದೆ.
ಟಾಟಾ ಅವರು ವಿವೇಕಾನಂದರ ವೈಜ್ಞಾನಿಕ, ವೈಚಾರಿಕ ನಿಲುವುಗಳು ಹಾಗೂ ಕೈಗಾರಿಕೀಕರದ ಪರವಾಗಿದ್ದ ನಿಲುವುಗಳನ್ನು ಶ್ಲಾಘಿಸಿದ್ದಾರೆ. ಇಂದು ಐಐಎಸ್ ಸಿ ಯು ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇಂಥ ಮಹನೀಯರಾದ ಸ್ವಾಮಿ ವಿವೇಕಾನಂದರ ಜನ್ಮದಿನದಂದು ನಾವು ಯುವನಿಧಿ ಎಂಬ ಸರ್ಕಾರದ 5ನೆ ಗ್ಯಾರಂಟಿ ಯೋಜನೆಯನ್ನು ಹಾಗೂ ಯುವಕರ ಆಶೋತ್ತರಗಳನ್ನು ಈಡೇರಿಸುವ ಈ ಕೆಲಸವನ್ನು ಮಾಡುತ್ತಿದ್ದೇವೆ.
ನಾವು ಈ ರೀತಿಯ ಹಲವಾರು ಯೋಜನೆಗಳನ್ನು ಮಾಡುವವರಿದ್ದೇವೆ. ಆದರೆ ಮೋದಿ ಸರ್ಕಾರ 100 ರೂಪಾಯಿಗಳನ್ನು ರಾಜ್ಯದಿಂದ ದೋಚಿಕೊಂಡು ಕೇವಲ 12 ರೂಪಾಯಿಗಳನ್ನು ನಮಗೆ ವಾಪಸ್ಸು ಕೊಡುತ್ತಿದೆ. [ 4 ಲಕ್ಷ ಕೋಟಿಯಲ್ಲಿ ಕೇವಲ 50 ಸಾವಿರ ಕೋಟಿ ಕೊಡುತ್ತಿದೆ] ನಮಗೆ ನ್ಯಾಯಯುತವಾಗಿ ಕೊಡಬೇಕಾಗಿದ್ದ 1.87 ಲಕ್ಷ ಕೋಟಿ ರೂಪಾಯಿಗಳನ್ನು ವಿವಿಧ ರೂಪದಲ್ಲಿ ನಮಗೆ ವಂಚಿಸಿದೆ. ವರ್ಷ ವರ್ಷ ಅಷ್ಟೂ ಹಣ ನಮಗೆ ಬಂದರೆ ಕರ್ನಾಟಕವನ್ನು ಉತ್ತರ ಯುರೋಪಿನ ದೇಶಗಳ ಮಟ್ಟಕ್ಕೆ ಕೊಂಡೊಯ್ಯುತ್ತೇವೆ.
ನಾವು ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ಯೂನಿವರ್ಸಲ್ ಬೇಸಿಕ್ ಇನ್ ಕಂ [ ಯುಬಿಐ] ಎಂಬ ಪರಿಕಲ್ಪನೆಯಡಿ ರೂಪಿಸಿದ್ದೇವೆ. ನಮ್ಮ ನಾಗರಿಕರು ಘನತೆಯಿಂದ ಬದುಕಲು ಬೇಕಾದ ನೆರವನ್ನು ಸರ್ಕಾರ ನೀಡುವ ಕಾರ್ಯಕ್ರಮಮಗಳು ಇವು. ನಮ್ಮ ಗ್ಯಾರಂಟಿ ಯೋಜನೆಗಳು ಜಗತ್ತಿನಲ್ಲೆ ಬಹುದೊಡ್ಡ ಕಲ್ಯಾಣ ಕಾರ್ಯಕ್ರಮಗಳ ಪಟ್ಟಿಗೆ ಸೇರಿಕೊಳ್ಳುತ್ತವೆ.
ನಾವು ಚುನಾವಣೆಗೂ ಮೊದಲು ಹೇಳಿದ್ದ ಮಾತುಗಳನ್ನು ಸಂಪೂರ್ಣ ಈಡೇರಿಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಕೂಡಲೆ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದೆವು. ನಮ್ಮ ಮಾತುಗಳನ್ನು ಇಂದು ಈಡೇರಿಸುತ್ತಿದ್ದೇವೆ. ನಾವು ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೆ ಏನೇ ಕಷ್ಟ ಬಂದರೂ ಪಂಚ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವುದಾಗಿ ತೀರ್ಮಾನಿಸಿ ಅಂದೇ ಸರ್ಕಾರಿ ಆದೇಶಗಳನ್ನು ಹೊರಡಿಸಿದೆವು. ನುಡಿದಂತೆ ನಡೆಯುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂಬುದನ್ನು ನಾವು ಇಂದು ಸಾಬೀತುಪಡಿಸಿದ್ದೇವೆ. ಇದಕ್ಕೆ ರಾಜ್ಯದ ಏಳು ಕೋಟಿ ಜನರೆ ಸಾಕ್ಷಿಯಾಗಿದ್ದಾರೆ.
ನಾವು ಅಧಿಕಾರ ಸ್ವೀಕರಿಸಿದಾಗ ನೋಡಿದರೆ ರಾಜ್ಯದ ಆರ್ಥಿಕತೆ ಅಯೋಮಯವಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡವಿತ್ತು. ರಾಜ್ಯದ ಜನರ ಮೇಲೆ ಬೃಹತ್ ಸಾಲದ ಹೊರೆಯನ್ನು ಹೊರಿಸಿದ್ದರು. ಬೊಮ್ಮಾಯಿಯವರು ಅಧಿಕಾರದಿಂದ ಇಳಿದಾಗ ಸರ್ಕಾರವು ಕೇವಲ 7 ಇಲಾಖೆಗಳಲ್ಲಿ 227913 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳನ್ನು ಅನುಮೋದಿಸಿ, ಬಜೆಟ್ ಮಾಡದೆ, ಹಣ ಒದಗಿಸದೆ ಆದೇಶಗಳನ್ನು ನೀಡಿತ್ತು. ಅವುಗಳಲ್ಲಿ ಬಹುತೇಕವು ಟೆಂಡರ್ ಕೂಡ ಆಗಿವೆ. ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಕಲ್ಯಾಣ ಕಾರ್ಯಕ್ರಮವನ್ನೂ ಜಾರಿಗೊಳಿಸಿರಲಿಲ್ಲ. ಬಿಜೆಪಿಯವರು ಮಾತೆತ್ತಿದರೆ ‘ಕಿಸಾನ್ ಸಮ್ಮಾನ್ ಯೋಜನೆ’ಯ ಬಗ್ಗೆ ಮಾತನಾಡುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇವಲ 47-49 ಲಕ್ಷ ಕುಟುಂಬಗಳಿಗೆ ಮಾತ್ರ ವರ್ಷಕ್ಕೆ 2 ರಿಂದ 4 ಸಾವಿರ ರೂಪಾಯಿಗಳನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ರಾಜ್ಯದಲ್ಲಿ 1.4 ಕೋಟಿಗೂ ಹೆಚ್ಚು ಕುಟುಂಬಗಳಿವೆ] 2019 ರಿಂದ 2022 ರವರೆಗೆ ಕಳೆದ 4 ವರ್ಷಗಳಲ್ಲಿ ಎರಡು ವರ್ಷ 2 ಸಾವಿರ ರೂಪಾಯಿ ಕೊಟ್ಟರೆ ಇನ್ನೆರಡು ವರ್ಷ 4 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದಾರೆ. ಮೋದಿಯವರ ಸರ್ಕಾರ ಇದೇ 47-49 ಲಕ್ಷ ಕುಟುಂಬಗಳಿಗೆ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ಅನಿಶ್ಚಿತವಾಗಿ ಕೊಡುತ್ತಿದೆ. ಯಡಿಯೂರಪ್ಪ, ಬೊಮ್ಮಾಯಿ ಮತ್ತು ಮೋದಿಯವರೆಲ್ಲ ಸೇರಿಕೊಂಡು ಈ 47-49 ಲಕ್ಷ ಕುಟುಂಬಗಳಿಗೆ ಕೊಟ್ಟಿದ್ದನ್ನು ತಿಂಗಳುಗಳಲ್ಲಿ ಲೆಕ್ಕ ಹಾಕಿದರೆ 666 ರೂಪಾಯಿಗಳಿಂದ 833 ರೂಪಾಯಿಗಳು ಮಾತ್ರ. ಆದರೆ ನಮ್ಮ ಸರ್ಕಾರ ರಾಜ್ಯದ ಸರಾಸರಿ 1.2 ಕೋಟಿ ಕುಟುಂಬಗಳಿಗೆ ತಿಂಗಳಿಗೆ ಸರಾಸರಿ 5000 ರೂಪಾಯಿಗಳನ್ನು ಗ್ಯಾರಂಟಿ ರೂಪದಲ್ಲಿ ನೀಡುತ್ತಿದ್ದೇವೆ. ಈ 5000 ರೂಪಾಯಿಗಳವರೆಗಿನ ಉಳಿತಾಯ ಮತ್ತು ಆದಾಯವು ಜನರ ಬದುಕಿನಲ್ಲಿ ಹೊಸ ಚೈತನ್ಯವನ್ನೆ ಸೃಷ್ಟಿಸಿದೆ. ಜನರ ಕೈಯಲ್ಲಿ ಹಣ ಇದ್ದರೆ ಅದನ್ನು ವಿನಿಯೋಗಿಸುವ ಶಕ್ತಿ ಕೂಡ ಹೆಚ್ಚಾಗುತ್ತದೆ. ಜನರ ತಲ್ಲಣಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತವೆ ಎಂಬುದು ಈ ಏಳೂವರೆ ತಿಂಗಳಲ್ಲಿ ನನ್ನ ಗಮನಕ್ಕೆ ಬಂದಿದೆ.
ಸರ್ಕಾರದ 4 ಗ್ಯಾರಂಟಿ ಯೋಜನೆಗಳ ಸಾಧನೆ
ಕ್ರ. ಸಂ. ಯೋಜನೆಯ ಹೆಸರು ಫಲಾನುಭವಿ ಕುಟುಂಬಗಳು/ ಫಲಾನುಭವಿಗಳು
ಡಿಸೆಂಬರ್ ಅಂತ್ಯದವರೆಗೆ ಖರ್ಚು [ಕೋಟಿ ರೂಗಳಲ್ಲಿ]
1 ಶಕ್ತಿ 126.25 ಕೋಟಿ ಟ್ರಿಪ್ಪುಗಳಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. 3016
2 ಗೃಹಜ್ಯೋತಿ 1.51 ಕೋಟಿ ಗ್ರಾಹಕ ಮನೆಗಳು 3650
3 ಗೃಹಲಕ್ಷ್ಮಿ 1.18 ಕೋಟಿ ಕುಟುಂಬಗಳು 7514
4 ಅನ್ನಭಾಗ್ಯ 4 ಕೋಟಿ ಫಲಾನುಭವಿಗಳು 4000
ಒಟ್ಟು 4.5 ಕೋಟಿಗೂ ಹೆಚ್ಚು ಜನರಿಗೆ ಈ ಯೋಜನೆ ತಲುಪುತ್ತಿದೆ. ಸರಾಸರಿ 1.33 ಕೋಟಿ ಕುಟುಂಬಗಳು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ 14580 ಕೋಟಿ ರೂಗಳನ್ನು ಈ ಯೋಜನೆಗಾಗಿ ಬಿಡುಗಡೆ ಮಾಡಿದ್ದೇವೆ.
ಈ ವರ್ಷ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬರಗಾಲವಿದೆ. ಹಾಗಾಗಿ ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಶೇ.5 ಕ್ಕೂ ಹೆಚ್ಚು ಇರುತ್ತಿದ್ದ ಕೃಷಿ ಬೆಳವಣಿಗೆ ದರ ಡಿಸೆಂಬರ್ ಅಂತ್ಯಕ್ಕೆ ಶೇ.1.8 ಕ್ಕೆ ಕುಸಿದಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಕರ್ನಾಟಕದ ಜನರಿಗೆ ಬರದ ಬೇಗೆ ತಟ್ಟದಂತೆ ಕಾಪಾಡಿರುವುದು ನಮ್ಮ ಗ್ಯಾರಂಟಿ ಯೋಜನೆಗಳು ಮಾತ್ರ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಅಂಕಿ ಅಂಶಗಳನ್ನು ಆಧರಿಸಿಯೆ ಈ ಮಾತನ್ನು ಹೇಳುತ್ತಿದ್ದೇನೆ. ಡಿಸೆಂಬರ್ ತಿಂಗಳಲ್ಲಿ ನಮ್ಮ ಜಿಎಸ್ಟಿ ಸಂಗ್ರಹಣೆಯ ದರವು ಶೇ. 17 ರಷ್ಟಿದೆ. ಗುಜರಾತಿನಲ್ಲಿ ಶೇ.7 ರಷ್ಟಿದೆ. ಮಹಾರಾಷ್ಟ್ರದಲ್ಲಿ ಶೇ. 14 ರಷ್ಟಿದೆ. ಕೇಂದ್ರವು ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಮಹಾರಾಷ್ಟ್ರದ ನಂತರ ಎರಡನೆ ಸ್ಥಾನದಲ್ಲಿದೆ. ಈಗ ಮಹಾರಾಷ್ಟ್ರದ ಜನಸಂಖ್ಯೆ 12.64 ಕೋಟಿ. ನಮ್ಮ ರಾಜ್ಯದ ಜನಸಂಖ್ಯೆ ಹತ್ತಿರತ್ತಿರ 7 ಕೋಟಿ.
ದೇಶದಲ್ಲಿ 2023 ರ ಅಂತ್ಯಕ್ಕೆ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ನಿರುದ್ಯೋಗದ ದರ ಹೆಚ್ಚಾಗಿದೆ. ದೇಶದ ನಿರುದ್ಯೋಗದ ಪ್ರಮಾಣವನ್ನು ನಿಖರವಾಗಿ ಅಧ್ಯಯನ ಮಾಡುವ ಸಿಎಂಐಇ ಸಂಸ್ಥೆಯ ಪ್ರಕಾರ ಕಳೆದ ಅಕ್ಟೋಬರ್ನಲ್ಲಿ 10.5 ರಷ್ಟಿದೆ. ಆದರೆ ಕರ್ನಾಟಕದಲ್ಲಿ ಈ ಪ್ರಮಾಣ ಶೇ.2.5 ರಷ್ಟಿದೆ. ಇಡೀ ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಇರುವ ರಾಜ್ಯ ಕರ್ನಾಟಕವಾಗಿದೆ. ಕೇಂದ್ರ ಸರ್ಕಾರದ ಎಷ್ಟೆಲ್ಲ ನೆರವು ಪಡೆದರೂ ಸಹ ಗುಜರಾತಿನ ನಿರುದ್ಯೋಗ ಪ್ರಮಾಣ ಕರ್ನಾಟಕದಷ್ಟೆ ಇದೆ. ಮಹಾರಾಷ್ಟ್ರದ ನಿರುದ್ಯೋಗ ಪ್ರಮಾಣ ಶೇ.3.1 ರಷ್ಟಿದೆ. ಆಂಧ್ರಪ್ರದೇಶ ಶೇ.7.7 ರಷ್ಟಿದೆ. ಹಿಮಾಚಲಪ್ರದೇಶ 7.6ರಷ್ಟಿದೆ.
ದೇಶವು ಯುವಕರಿಗೆ ಉದ್ಯೋಗ ಒದಗಿಸುವ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಯುವಜನರ ಪಾಲಿನ ಶತ್ರುವಾಗಿದೆ. ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕದಲ್ಲಿ 20 ರಿಂದ 24 ರವರೆಗಿನ ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣ ಶೇ.44.39 ರಷ್ಟಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಇಂದು ಸುಮಾರು 53 ಕೋಟಿ ಕಾರ್ಮಿಕ ಶಕ್ತಿಯಿದೆ. ಆದರೆ ಉದ್ಯೋಗಗಳು ಮಾತ್ರ ಸೃಷ್ಟಿಯಾಗುತ್ತಿಲ್ಲ. ಇದರಲ್ಲಿ ಒಟ್ಟಾರೆ ಶೇ. 10.5 ರಷ್ಟು ನಿರುದ್ಯೋಗವಿದೆ. ಇದರಲ್ಲಿ 20-24 ರ ವಯೋಮಾನದ ಯುವಜನರ ನಿರುದ್ಯೋಗದ ಪ್ರಮಾಣ ಶೇ. 44.39 ರಷ್ಟಿದೆ. ಈ ನಡುವೆ ನಮ್ಮ ಗ್ಯಾರಂಟಿ ಕಾರಣಗಳಿಗಾಗಿ ಈ ವರ್ಷ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. 2022 ರ ಏಪ್ರಿಲ್ನಿಂದ 2023 ರ ಮಾರ್ಚ್ವರೆಗೆ 1025 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆದರೆ ಈ ವರ್ಷ ಎಪ್ರಿಲ್ - ಮೇ -2023 ರಿಂದ 11-1-2024 ರವರೆಗಿನ [ನಿನ್ನೆಯವರೆಗೆ] ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ 507 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅರ್ಹ ಪ್ರಕರಣಗಳು 393. ರೈತರ ಸಾವುಗಳು ರಾಷ್ಟ್ರೀಯ ದುರಂತಗಳು. ಒಂದು ಸಾವೂ ಸಂಭವಿಸಬಾರದು. ಅದಕ್ಕಾಗಿಯೆ ನಾವು ಕೆಲಸ ಮಾಡುತ್ತಿದ್ದೇವೆ. ಇದನ್ನು ಭ್ರಷ್ಟ ಜನತಾ ಪಾರ್ಟಿ[ ಬಿಜೆಪಿ], ಸುಳ್ಳಿನ ಕಾರ್ಖಾನೆಯಾಗಿರುವ ಬಿಜೆಪಿಯವರಿಗೆ ಅರ್ಥ ಮಾಡಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ನಿರುದ್ಯೋಗದ ಬಿಸಿಯನ್ನು ತಗ್ಗಿಸುವುದಕ್ಕಾಗಿಯೆ ನಾವು ಈ ಯೋಜನೆ ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳಗಳನ್ನು ಮಾಡುವ ಮೂಲಕ ಉದ್ಯೋಗ ದೊರಕಿಸಿಕೊಡುವ ಕೆಲಸವನ್ನೂ ಮಾಡುತ್ತೇವೆ.
ಸರ್ಕಾರದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಈಗಾಗಲೆ ಪ್ರಾರಂಭಿಸಿದ್ದೇವೆ.
ಶಿವಮೊಗ್ಗದ ಜನರು ಬುದ್ಧಿವಂತರು. ಇಲ್ಲಿ ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ಎರಡೂ ಕ್ಷೇತ್ರಗಳಿಗೆ ನಾಯಕತ್ವ ಕೊಟ್ಟ ಜನರು ಹುಟ್ಟಿದ ನೆಲ ಇದು. ಇಲ್ಲಿ ಕುವೆಂಪು, ತೇಜಸ್ವಿ, ಅನಂತಮೂರ್ತಿ, ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಕಡಿದಾಳು ಮಂಜಪ್ಪ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮುಂತಾದವರಿಗೆ ಜನ್ಮಕೊಟ್ಟ ನೆಲ ಇದು. ಇಂಥ ಮಹನೀಯರ ನೆಲದಲ್ಲಿ ದೇಶದ ಇತಿಹಾಸಕ್ಕೆ ಕಳಂಕ ತಂದ, ಒಡೆದು ಆಳುವ ನೀತಿಯ ಮೂಲಕ ದ್ವೇಷ, ಭೀತಿ, ಹಿಂಸೆ, ಆತಂಕ, ರಕ್ತಪಾತಗಳಲ್ಲಿ ನಂಬಿಕೆ ಇಟ್ಟ ಬಿಜೆಪಿಯನ್ನೂ ಬೆಳೆಸಲಾಯಿತು. ಜಿಲ್ಲೆಯ ಜನ ಒಮ್ಮೆ ಹಿಂದಕ್ಕೆ ತಿರುಗಿ ನೋಡಬೇಕು. ಭವಿಷ್ಯದತ್ತ ಕಣ್ಣು ಹಾಯಿಸಿ ದೂರಕ್ಕೆ ನೋಡಬೇಕು. ಅಲ್ಲಿ ನಿಮಗೆ ಒಳ್ಳೆಯ ಭವಿಷ್ಯ ಇದೆಯೆ? ಎಂದು ಕೇಳಿಕೊಳ್ಳಬೇಕು.
ನಿರುದ್ಯೋಗ, ಬಡತನ, ಅಕ್ಷರವಿದ್ದರೂ ಅಜ್ಞಾನ, ದ್ವೇಷ, ಹಿಂಸೆಗಳ ಸೃಷ್ಟಿಯೆ ಬಿಜೆಪಿಯ ಸಾಧನೆ. ಹಿಂದೆ ನಮ್ಮ ನಾಯಕರುಗಳು ದೇಶದ ಹಸಿದ ಹೊಟ್ಟೆಗಳಿಗೆ ಅನ್ನ ಉತ್ಪಾದಿಸಲು ಅಣೆಕಟ್ಟುಗಳನ್ನು ಕಟ್ಟಿ, ಭೂ ಸುಧಾರಣೆ ಕಾನೂನುಗಳನ್ನು ತಂದು, ಭೂ ಮಂಜೂರಾತಿ ನಿಯಮಗಳನ್ನು ಜಾರಿಗೊಳಿಸಿ, ದುಡಿವ ಕೈಗಳಿಗೆ ಉದ್ಯೋಗ ನೀಡಲು ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ ಸಂಭ್ರಮಿಸುತ್ತಿದ್ದರು. ನಾವೂ ದೇಶದುದ್ದಗಲಕ್ಕೂ ಲಕ್ಷಾಂತರ ದೇವಾಲಯಗಳನ್ನು ಕಟ್ಟಿಸಲು ನೆರವಾಗಿದ್ದೇವೆ. ಮುಜರಾಯಿ ಇಲಾಖೆಯ ಮೂಲಕ ಬಿಜೆಪಿಯವರಿಗಿಂತ ಅತಿ ಹೆಚ್ಚು ಅನುದಾನಗಳನ್ನು ನೀಡಿದ್ದೇವೆ. ಆದರೆ ಓಟಿಗಾಗಿ ಅಪೂರ್ಣಗೊಂಡ ದೇವಸ್ಥಾನವೊಂದರ ಉದ್ಘಾಟನೆಯನ್ನು ಮಾಡಿ ದೇಶದ ಎಲ್ಲ ಸಮಸ್ಯೆಗಳನ್ನೂ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಮೋದಿಯವರನ್ನು ಮುತ್ಸದ್ಧಿ ಎನ್ನಲು ಸಾಧ್ಯವೆ?
ನಾನು ಈ ರಾಜ್ಯದ/ ದೇಶದ ಜನರನ್ನು ಕೇಳಬಯಸಿದ್ದೇನೆ. ದೇವಸ್ಥಾನದ ಉದ್ಘಾಟನೆಯ ಅಬ್ಬರ ಯಾಕೆ? ಯುವಜನರಿಗೆ ನಿರುದ್ಯೋಗವನ್ನು ಖಾಯಂ ಮಾಡಿದ್ದಕ್ಕಾ? ರೈತರಲ್ಲಿ ಭರವಸೆಯನ್ನು ಅಳಿಸಿ ಹಾಕಿದ್ದಕ್ಕಾ? ನಮ್ಮ ಅಕ್ಕ ಪಕ್ಕದ ದೇಶಗಳನ್ನು ಚಿನಾ ದೇಶವು ಕಬಳಿಸಿ ನುಂಗುತ್ತಿದೆ ಇದು ದೇಶದ ಜನರಿಗೆ ತಿಳಿಯಬಾರದೆಂದಾ? ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಲ 122 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ರಾಜ್ಯಗಳ ಮತ್ತು ಕೇಂದ್ರದ ಸಾಲ ಸೇರಿಸಿದರೆ ಸುಮಾರು 260 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಇದು ದೇಶದ ಒಟ್ಟಾರೆ ಸಂಪತ್ತಿನಷ್ಟು ಅಥವಾ ಒಂದು ವರ್ಷದ ಜಿಡಿಪಿಯಷ್ಟು. ದೇಶ 100 ರೂಪಾಯಿ ದುಡಿದರೆ 100 ಸಾಲವಿದೆ. ಇದು ಜನರಿಗೆ ತಿಳಿಯಬಾರದೆಂದಾ? ದೇಶದಲ್ಲಿ ಭಯೋತ್ಪಾದಕರ ದಾಳಿಯಿಂದ ಅಸಂಖ್ಯಾತ ಸೈನಿಕರು ಮರಣ ಹೊಂದುತ್ತಿದ್ದಾರೆ ಇದು ಜನರಿಗೆ ಗೊತ್ತಾಗಬಾರದೆಂದಾ? ಮೇಕ್ ಇನ್ ಇಂಡಿಯಾ ಎಂದು ಹೇಳಿ ಕೇವಲ ಚೀನಾ ದೇಶದಿಂದ ಲಕ್ಷ ಲಕ್ಷ ಕೋಟಿಗಳಲ್ಲಿ ಆಮದು ಮಾಡಿಕೊಂಡು ದೇಶದ ಆರ್ಥಿಕತೆಯನ್ನೆ ಆತಂಕಕ್ಕೆ ದೂಡಿರುವುದು ಜನರಿಗೆ ತಿಳಿದುಬಿಡುತ್ತದೆ ಎಂದಾ? ಕೊರೋನಾ ಬಂದಿದ್ದಾಗ ರೈತ ವಿರೋಧಿ ಕಾಯ್ದೆಗಳನ್ನು ತಂದಿದ್ದು, ಕಾರ್ಪೊರೇಟ್ ಕುಳಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಿ ಜನರ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸಿದ್ದು ಜನರಿಗೆ ತಿಳಿಯಲು ಬಿಡಬಾರದೆಂದಾ? ಮನಮೋಹನಸಿಂಗರ ಸರ್ಕಾರ ಜನರಿಗೆ ನೀಡುತ್ತಿದ್ದ ಬಹುತೇಕ ಸಬ್ಸಿಡಿಗಳನ್ನು ನಿಲ್ಲಿಸಿದ್ದು ಜನರಿಗೆ ತಿಳಿಯದೆ ಅವರ ಗಮನ ಬೇರೆ ಕಡೆ ತಿರುಗಿಸಬೇಕು ಎಂದಾ? ಮೋದಿ ಸರ್ಕಾರವು ಕೇವಲ ಅದಾನಿ ಮತ್ತು ಅಂಬಾನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿರುವ ಸತ್ಯ ಜನರಿಗೆ ತಿಳಿದುಬಿಡುತ್ತದೆ ಎಂಬ ಆತಂಕವಾ? ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದು ಗೊತ್ತಾಗಬಾರದೆಂದಾ?
ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಮತ್ತು ಎರಡನೆಯ ಬಾರಿಗೆ ಅಧಿಕಾರ ಹಿಡಿಯುವಾಗ ಜನರಿಗೆ ಕೊಟ್ಟಿದ್ದ ಆಶ್ವಾಸನೆಗಳೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿರುವುದು ಜನರಿಗೆ ಗೊತ್ತಾಗಬಾರದೆಂದು ಈ ನಾಟಕ ನಡೆಯುತ್ತಿದೆಯಾ? ಈ ದೇಶದ ಎಲ್ಲ ಸಮಸ್ಯೆಗಳು ಕೊನೆಯಾದವೆಂಬಂತೆ ಮಾಧ್ಯಮಗಳ ಮೂಲಕ ಪ್ರತಿ ದಿನ ಪ್ರಚಾರ ಮಾಡಿಸುತ್ತಿರುವ ಪರಿಗೆ ಏನು ಹೇಳುವುದು? ಇದು ರಾಜಕಾರಣವಾ? ಸಂವಿಧಾನದ ಆಶಯಗಳನ್ನು ಪಾಲಿಸುತ್ತಿರುವ ಸರ್ಕಾರ ಕೇಂದ್ರದಲ್ಲಿ ಇದೆಯಾ? ದೇಶದ ನಿರುದ್ಯೋಗವನ್ನೆ ನೋಡಿದರೆ ಎದೆ ಒಡೆಯುತ್ತದೆ.
2014 ಕ್ಕೂ ಮೊದಲು ದೇಶದ ನಿರುದ್ಯೋಗದ ಪ್ರಮಾಣ ಸರಾಸರಿ ಶೇ. 5 ರಷ್ಟಿತ್ತು. ಅಥವಾ ಅದಕ್ಕಿಂತ ಕಡಿಮೆ ಇತ್ತು. ಆದರೆ ಮೋದಿಯವರ ಅಧಿಕಾರದ ಅವಧಿಯಲ್ಲಿ ಈಗ ಶೇ.11ಕ್ಕೆ ಬಂದು ಮುಟ್ಟುತ್ತಿದೆ. ದೇಶದ ಯುವಜನರು ದಿಕ್ಕೆಟ್ಟು ಕೂತಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಮಾತ್ರ ನಿರುದ್ಯೋಗ ದರ ಕಡಿಮೆ ಇದೆ. ಕರ್ನಾಟಕದಲ್ಲಿ ನಿರುದ್ಯೋಗದ ದರ ಕೇವಲ ಶೇ. 2.5 ರಷ್ಟಿದೆ. ಇಡೀ ದೇಶದಲ್ಲಿಯೆ ನಿರುದ್ಯೋಗ ಕಡಿಮೆ ಇರುವ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಯಾವುದೇ ದೇಶದ ಆರ್ಥಿಕತೆಗೆ ವೇಗ ಬರುವುದು ಅಲ್ಲಿನ ಯುವ ಜನರು ದುಡಿಮೆಯಲ್ಲಿ ತೊಡಗಿಕೊಂಡಾಗ ಮಾತ್ರ. ಯಾವುದೇ ನಾಗರಿಕವೆನ್ನಿಸಿಕೊಂಡ ರಾಷ್ಟ್ರದಲ್ಲಿ ಜನರ ತಿಳುವಳಿಕೆ, ಜ್ಞಾನ ಕೌಶಲಗಳಿಗೆ ಅನುಗುಣವಾದ ದುಡಿಮೆಗಳು ದೊರೆತರೆ ಮಾತ್ರ ಆ ಸಮಾಜ ಮುನ್ನಡೆಯುತ್ತಿದೆ ಎಂದು ಅರ್ಥ. ಜನರ ಕೈಯಲ್ಲಿ ಕೆಲಸವಿದ್ದರೆ ಜೇಬಿನಲ್ಲಿ ಹಣವಿರುತ್ತದೆ. ಜನರು ಖರ್ಚು ಮಾಡುತ್ತಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಸಮರ್ಪಕವಾಗಿರುತ್ತದೆ, ಇದು ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನ. ದೇಶವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತವರಿಗೆ ಇಷ್ಟು ಜ್ಞಾನವಿಲ್ಲದೆ ಹೋದರೆ ಅಂಥ ದೇಶ ಅರಾಜಕತೆಯತ್ತ ಸಾಗಿ ಅಧೋಗತಿಗೆ ಇಳಿಯುತ್ತದೆ.
ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಯುವಕರು ಪಕೋಡ ಮಾರಲು ಹೋದರೆ, ಪಕೋಡ ಮಾರುವ ವೃತ್ತಿಯವರು ಎಲ್ಲಿಗೆ ಹೋಗಬೇಕು? ಇಷ್ಟಕ್ಕೂ ಒಬ್ಬ ಇಂಜಿನಿಯರ್ ಅನ್ನು ಸಿದ್ಧಪಡಿಸಲು ನಾಗರಿಕ ಸಮಾಜದ ದೊಡ್ಡ ಮೊತ್ತದ ತೆರಿಗೆ ಹಣವನ್ನು ಆತನ ಮೇಲೆ ವಿನಿಯೋಗಿಸಲಾಗಿರುತ್ತದೆ. ಜಗತ್ತಿನಲ್ಲಿಯೆ ಸಶಕ್ತ ದೇಶವನ್ನು ನಿರ್ಮಿಸುವ ಅವಕಾಶವನ್ನು ಮೋದಿಯವರು ಕೈಯಾರೆ ಹೊಸಕಿ ಹಾಕಿದರು. ಯುವಕರ ಕನಸುಗಳೂ ಕಮರಿ ಹೋದವು. ಇಂದು ದೇಶದ ಹಳ್ಳಿಗಳಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್ ಡಿ ಮಾಡಿದವರು ಕೋಟ್ಯಾನುಕೋಟಿ ಯುವಕರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಾ ಇದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಕಣ್ಣಿಗೆ ನಿದ್ದೆ ಇಲ್ಲದೆ ಓಲಾ, ಉಬರ್ ಟ್ಯಾಕ್ಸಿಗಳನ್ನು ಓಡಿಸಿಕೊಂಡು, ಸ್ವಿಗ್ಗಿ, ಝೊಮ್ಯಾಟೊ ಮುಂತಾದ ಕಡೆ ಸೇಲ್ಸ್ ಬಾಯ್ ಗಳಾಗಿ ಗಾರ್ಮೆಂಟುಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಬಿಜೆಪಿಯು ಒಂದು ಕಾಲದಲ್ಲಿ ಪದೆ ಪದೆ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿತ್ತು. ಆದರೆ 2014 ರಿಂದ 2023 ರ ಡಿಸೆಂಬರ್ ವೇಳೆಗೆ 10 ವರ್ಷಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಯುವಜನರು ಭಾರತದ ನಾಗರಿಕತ್ವವನ್ನೇ ಬಿಟ್ಟು ಹೊರ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಪ್ರತಿಭಾವಂತ ಯುವಕರು ದೇಶದಲ್ಲಿ ನೆಲಸಲು ಇಷ್ಟಪಡುತ್ತಿಲ್ಲ. ದಿನ ನಿತ್ಯವೂ ಹಿಂಸೆ, ಗೊಂದಲ, ಆರ್ಥಿಕ ಕುಸಿತ, ಜ್ಞಾನ- ವಿಜ್ಞಾನಗಳಿಗೆ ಇಲ್ಲದ ಆದ್ಯತೆ, ಕೋಮು ಸಂಘರ್ಷ, ಅಬಿವೃದ್ಧಿ ಶೂನ್ಯತೆ, ಸೃಷ್ಟಿಯಾಗದ ಉದ್ಯೋಗಗಳು ಮುಂತಾದ ಕಾರಣಗಳಿಗಾಗಿ ಯುವಜನರು ನಾಗರಿಕತ್ವ ತೊರೆಯುತ್ತಿದ್ದಾರೆ. ಇದು ಗೊತ್ತಾಗಬಾರದೆಂದು ಮೋದಿ ಮತ್ತವರ ಬಿಜೆಪಿ ಸರ್ಕಾರ ಮಂದಿರದ ಪ್ರಚಾರಕ್ಕೆ ಇಳಿದಿದೆ.
ನಾವು ಲಜ್ಜೆಗೆಟ್ಟ, ಮಾತು ತಪ್ಪಿದ, ನಾಲಿಗೆಯ ಮೇಲೆ ನಿಗಾ ಇಲ್ಲದ ಸುಳ್ಳಿನ ಕಾರ್ಖಾನೆ ಎಂದೇ ಕರೆಸಿಕೊಳ್ಳುವ ಬಿಜೆಪಿಯವರ ಜೊತೆ ನಮ್ಮ ಸರ್ಕಾರವನ್ನು ಹೋಲಿಸಿಕೊಳ್ಳುವುದೇ ಇಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುವವರು. 2013-18 ರವರೆಗೆ ಹೇಳದೆಯೂ ಬಹುತೇಕ ಪೈಲೆಟ್ ಕಾರ್ಯಕ್ರಮಗಳನ್ನು ಮಾಡಿದ್ದೇವೆ.
ಯುವನಿಧಿ ಯೋಜನೆ ನಮ್ಮ 5ನೆ ಗ್ಯಾರಂಟಿ ಯೋಜನೆ. 2022-23 ರಲ್ಲಿ ಪದವಿ, ಡಿಪ್ಲೊಮಾಗಳನ್ನು ಮುಗಿಸಿ ಉದ್ಯೋಗ ದೊರಕದೆ ನಿರುದ್ಯೋಗಿಗಳಾಗಿರುವ ಯುವಜನರಿಗೆ 2 ವರ್ಷಗಳ ಕಾಲ ನಿರುದ್ಯೋಗಭತ್ಯೆಯನ್ನು ಕೊಡಲಾಗುವುದೆಂದು ಘೋಷಿಸಿದ್ದೆವು. ಈ ಯುವಜನರ ಫಲಿತಾಂಶಗಳು ಬಂದು ಆರು ತಿಂಗಳಾದರೂ ಉದ್ಯೋಗ ಸಿಗದಿದ್ದಾಗ ನಮ್ಮ ಈ ಯೋಜನೆಗೆ ಅರ್ಹರಾಗುತ್ತಾರೆ. ಪದವಿ ಮುಗಿಸಿದ ಯುವಕ ಯುವತಿಯರಿಗೆ ತಿಂಗಳಿಗೆ 3000 ಮತ್ತು ಡಿಪ್ಲೊಮಾ ಮುಗಿಸಿದವರಿಗೆ 1500 ರೂಗಳನ್ನು ಯುವನಿಧಿ ಯೋಜನೆಯ ಮೂಲಕ ಕೊಡುತ್ತಿದ್ದೇವೆ. ಇದು ಯುವಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು, ಕುಟುಂಬದ ತಕ್ಷಣದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಮುಂತಾದ ಉದ್ದೇಶಗಳಿಗೆ ಈ ಹಣವನ್ನು ಬಳಸಲಿ ಎಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ. ನಮ್ಮ ಸರ್ಕಾರದ ಜೊತೆ ನಿಲ್ಲಿ. ಮೋದಿ ಸರ್ಕಾರದ ದೋಖಾಗಳನ್ನು ತಿಳಿದವರು ತಿಳಿಯದವರಿಗೆ ಹೇಳಿ. ಬಹುತೇಕ ಮೀಡಿಯಾಗಳು ಜನರ ಜೊತೆ ಇಲ್ಲ. ಜನರ ಕಷ್ಟಗಳಿಗೆ ಸ್ಪಂದಿಸದ ಮೀಡಿಯಾಗಳನ್ನು ತಿರಸ್ಕರಿಸಿ. ಅವುಗಳು ಸುಳ್ಳು ಹೇಳುತ್ತಿದ್ದರೆ, ನೀವು ಸುಳ್ಳು ಹೇಳುತ್ತಿದ್ದೀರಿ. ನೀವು ಯಾರದೊ ತುತ್ತೂರಿಗಳಾಗಿದ್ದೀರಿ. ಪಕ್ಷಪಾತಿಗಳಾಗಿದ್ದೀರಿ. ಯಾವುದೊ ಒಂದು ಜಾತಿಯ, ಒಂದು ವರ್ಗದ ಹಿತಾಸಕ್ತಿಯನ್ನು ಕಾಪಾಡುತ್ತಿದ್ದೀರಿ ಎಂದು ಹೇಳಿ. ವಾಟ್ಸಾಪ್ ಯೂನಿವರ್ಸಿಟಿಯೆಂಬುದು ಅತ್ಯಂತ ಸುಳ್ಳಿನ ಕಂತೆಯಾಗಿದೆ. ಅದರ ಕೆಲಸ ಸುಳ್ಳನ್ನು ಉತ್ಪಾದಿಸಿ ಅಮಾಯಕರಿಗೆ ಹಂಚುವುದೇ ಆಗಿದೆ. ಇಂಥ ಎಲ್ಲ ಪಿತೂರಿಗಳ ವಿರುದ್ಧ, ಜನದ್ರೋಹಿಗಳ ವಿರುದ್ಧ ಸತ್ಯ ತಿಳಿದವರು ನಿಲ್ಲಬೇಕೆಂದು ಮನವಿ ಮಾಡುತ್ತೇನೆ. ಈ ದೇಶದಲ್ಲಿ ಜನರಿಗೆ ಸುಳ್ಳು ಯಾವುದು? ಸತ್ಯ ಯಾವುದು ಎಂದು ಗೊತ್ತಾದ ದಿನ ದೇಶದ ಭವಿಷ್ಯಕ್ಕೆ ಹೊಸ ಸೂರ್ಯ ಸಿಕ್ಕಿದಂತಾಗುತ್ತದೆ. ಉದಯಿಸಿದಂತಾಗುತ್ತದೆ.
ನಾವು ನಿಮ್ಮೊಂದಿಗಿದ್ದೇವೆ. ಹೇಳಿದ್ದನ್ನು ಮಾಡಿ, ಮಾಡಿದ್ದೇವೆ ನೋಡಿ ಎಂದು ಹೇಳಲು ಮಾತ್ರ ನಿಮ್ಮ ಮುಂದೆ ಬರುತ್ತಿದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ, ಚಿನ್ನದ ರಸ್ತೆಗಳು, ರೈತರ ಆದಾಯ ದುಪ್ಪಟ್ಟು, 5 ಟ್ರಿಲಿಯನ್ ಆರ್ಥಿಕತೆ, 2022-23 ರ ಒಳಗೆ ಎಲ್ಲರಿಗೂ ಮನೆ, ಮನೆ ಮನೆಗೆ ಗ್ಯಾಸು, ಮನೆ ಮನೆಗೆ ನಲ್ಲಿ, ಕಪ್ಪುಹಣ ವಾಪಸ್ಸು ತರುವುದು, ರೂಪಾಯಿ ಮೌಲ್ಯ ಹೆಚ್ಚಿಸಿ ಡಾಲರ್ ಸಮಕ್ಕೆ ತರುವುದು, ಲೋಕ್ ಪಾಲ್ ಸ್ಥಾಪನೆ, ಮೇಕ್ ಇನ್ ಇಂಡಿಯಾ ಮಾಡಿ ಹೊರಗಿನಿಂದ ಆಮದನ್ನು ನಿಲ್ಲಿಸುವುದು ಮುಂತಾದ ಎಲ್ಲ ಘೋಷಣೆಗಳು ಏನಾದವು ಎಂದು ಕೇಳಬೇಕಲ್ಲ ನಾವು? ಇಂದಿನಿಂದಾದರೂ ಕೇಳಲು ಪ್ರಾರಂಭಿಸುತ್ತೀರಿ ಎಂದು ಭಾವಿಸಿದ್ದೇನೆ. ಸುಳ್ಳನ್ನು ಸೋಲಿಸಿ, ಕೆಲಸ ಮಾಡುವವರ ಜೊತೆಗೆ ನಿಲ್ಲಿ ಎಂದು ವಿನಂತಿಸುತ್ತೇನೆ.
ಎಲ್ಲರಿಗೂ ನಮಸ್ಕಾರ... ಮತ್ತೊಮ್ಮೆ ಸ್ವಾಮಿ ವಿವೇಕಾನಂದರ ಜನ್ಮದಿನ, ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.